Home ನಮ್ಮ ಜಿಲ್ಲೆ ಧಾರವಾಡ ಧಾರವಾಡ: ಕೃಷಿ ಮೇಳಕ್ಕೆ ಹೊಸ ಸ್ಪರ್ಶವಿರಲಿ – ಲಾಡ್

ಧಾರವಾಡ: ಕೃಷಿ ಮೇಳಕ್ಕೆ ಹೊಸ ಸ್ಪರ್ಶವಿರಲಿ – ಲಾಡ್

0

ಧಾರವಾಡ: ಲಕ್ಷ ಲಕ್ಷ ಜನ ಸೇರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಈ ತಿಂಗಳಿನಲ್ಲಿ ನಡೆಯುವ ಧಾರವಾಡ ಕೃಷಿ ಮೇಳದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ವಿವಿ ಅಧಿಕಾರಿಗಳ ಜೊತೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಪ್ರದಾಯದಂತೆ ನಡೆಯುವ ಎಲ್ಲಾ ಕಾರ್ಯಕ್ರಮಗಳು ನಡೆಯಲಿ. ಅದರ ಜೊತೆಗೆ ಕೃಷಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮನರಂಜನೆ ನೀಡುವ ಉದ್ದೇಶದಿಂದ ಒಂದಿಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುವುದು. ಅದಕ್ಕಾಗಿ ರಾಜ್ಯದ ವಿವಿಧ ಕೃಷಿ ವಿವಿಗಳಿಂದ ಸಾಂಸ್ಕೃತಿಕ ತಂಡಗಳಿದ್ದರೆ ಅವರನ್ನು ಕೂಡ ಕರೆದು ತರಬೇಕು ಎಂದರು.

ಕೃಷಿ ವಿಶ್ವವಿದ್ಯಾಲಯ ವರ್ಷದಿಂದ ವರ್ಷಕ್ಕೆ ರೈತರ ಬಳಿ ಹೋಗಬೇಕಾಗಿದೆ. ಕೃಷಿ ಮೇಳ ಒಂದು ಜಾತ್ರೆಯಂತಾಗದೇ ಅರ್ಥಪೂರ್ಣ ವಿಚಾರಗಳ ಪ್ರಸರಣಕ್ಕೆ ಅನುಕೂಲವಾಗುವಂತಾಗಬೇಕು. ಹೀಗಾಗಿ ರಾಜ್ಯದ ಎಲ್ಲ ಏಳು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪಂಡಿತರನ್ನು ಕರೆದು ತಂದು ಅವರಿಂದ ವಿಶೇಷ ಉಪನ್ಯಾಸ ನೀಡುವಂತೆ ವ್ಯವಸ್ಥೆ ಮಾಡಬೇಕು ಎಂದರು.

ಅಧಿಕಾರಿಗಳಿಗೆ ತರಾಟೆ: ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳ ಬಳಿ ಸಾಕಷ್ಟು ಅಂಕಿ ಅಂಶಗಳ ಬಗ್ಗೆ ಸಚಿವ ಸಂತೋಷ ಲಾಡ್ ವಿಚಾರಿಸಿದರು. ಆದರೆ, ಸರಿಯಾದ ಅಂಕಿ ಅಂಶಗಳು ಲಭಿಸದೇ ಇದ್ದಾಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೃಷಿ ವಿವಿ ಸ್ಥಾಪನೆಯಾಗಿ ದಶಕಗಳೇ ಕಳೆದರೂ ಇಲ್ಲಿಯವರೆಗೂ ರೈತರು ತಮ್ಮ ಹೊಲಗಳಲ್ಲಿ ಇರುವ ಮಣ್ಣಿನ ಗುಣಮಟ್ಟ ಮತ್ತು ಅದನ್ನು ಆಧರಿಸಿ ಬೆಳೆ ಬೆಳೆಯುವ ಪದ್ಧತಿಯನ್ನು ರೂಢಿಸಿಕೊಂಡಿಲ್ಲ ಎಂದರು.

ರಾಜ್ಯದಲ್ಲಿ ಬೆಳೆಹಾನಿ, ನೀರು ಬಳಕೆ, ಸಮಗ್ರ ಕೃಷಿ ಸೇರಿದಂತೆ ವಿಭಿನ್ನ ವಿಚಾರಗಳು ಚರ್ಚೆಯಲ್ಲಿವೆ. ಇದೆಲ್ಲದರ ನಡುವೆ ರಾಜ್ಯಕ್ಕೆ ಮಾದರಿಯಾಗುವ ಬೆಳೆ ವಿಧಾನವೊಂದನ್ನು ಶೋಧಿಸಿ ಕೊಡುವ ಅಗತ್ಯವಿದೆ. ಅದನ್ನು ಕೃಷಿ ವಿವಿ ಮಾಡಬೇಕಿತ್ತು. ಈ ವರೆಗೂ ಮಾಡಿಲ್ಲ. ಆದರೆ ಇನ್ನಾದರೂ ಮಾದರಿಯೊಂದನ್ನು ನಿರ್ಮಿಸಿ ಕೊಡುವ ಉದ್ದೇಶದಿಂದ ಒಂದು ಜಿಲ್ಲೆ ಅಥವಾ ತಾಲೂಕನ್ನು ಮಾದರಿ ತಾಲೂಕಾಗಿ ನಿರ್ಮಿಸಿ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷಿ ಮೇಳಕ್ಕೆ ಬರುವ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version