Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು: ಮೆಟ್ರೋ ಹಳದಿ ಮಾರ್ಗ, ಪ್ರತಿನಿತ್ಯದ ಪ್ರಯಾಣಿಕರೆಷ್ಟು?

ಬೆಂಗಳೂರು: ಮೆಟ್ರೋ ಹಳದಿ ಮಾರ್ಗ, ಪ್ರತಿನಿತ್ಯದ ಪ್ರಯಾಣಿಕರೆಷ್ಟು?

0

ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್ 11ರಿಂದ ರೈಲು ಸಂಚಾರ ಆರಂಭವಾಗಿದೆ. ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿರುವುದು ಕೇವಲ 3 ರೈಲುಗಳು ಮಾತ್ರ.

ಮೊದಲ ದಿನವೇ ಸುಮಾರು 58 ಸಾವಿರ ಪ್ರಯಾಣಿಕರು ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ ಮೂಲಕ ದಾಖಲೆ ಬರೆದಿದ್ದರು. ಈಗ ಪ್ರತಿನಿತ್ಯ ಎಷ್ಟು ಜನರು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಾರೆ? ಎಂಬುದು ಪ್ರಶ್ನೆಯಾಗಿದೆ.

ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳಿವೆ. 19.15 ಕಿ.ಮೀ. ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸಲಿದ್ದು, ಟೆಕ್ಕಿಗಳಿಗೆ ಅನುಕೂಲವಾಗಿದೆ. 25 ನಿಮಿಷಕ್ಕೊಂದು ರೈಲನ್ನು ಬಿಎಂಆರ್‌ಸಿಎಲ್ ಓಡಿಸುತ್ತಿದೆ.

ಪ್ರಯಾಣಿಕರ ಸಂಖ್ಯೆ: ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ ಪ್ರತಿನಿತ್ಯ ಹಳದಿ ಮಾರ್ಗದಲ್ಲಿ ಸುಮಾರು 60,000 ಪ್ರಯಾಣಿಕರು ಸಂಚಾರವನ್ನು ನಡೆಸುತ್ತಿದ್ದಾರೆ. ಕೇವಲ 3 ರೈಲುಗಳ ಸಂಚಾರ, 25 ನಿಮಿಷಕ್ಕೊಂದು ರೈಲು ಸಂಚಾರ ನಡೆಸುವ ಕಾರಣ ಹೆಚ್ಚಿನ ಪ್ರಯಾಣಿಕರನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿನಿತ್ಯ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ 30,000ಕ್ಕೆ ಕಡಿಮೆ ಆಗಬಹುದು ಎಂದು ಅಂದಾಜಿಸಿದ್ದೆವು. ಆದರೆ ಪ್ರತಿದಿನ ಸುಮಾರು 60 ಸಾವಿರ ಜನರು ಪ್ರಯಾಣಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರದ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಸಂಜೆಯ ಪೀಕ್ ಅವರ್‌ನಲ್ಲಿ ಶೇ 20ರಷ್ಟು ಹೆಚ್ಚಿನ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಬೆಳಗ್ಗೆಗೆ ಹೋಲಿಕೆ ಮಾಡಿದರೆ ಸಂಜೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಸ ಮಾಡುವ ಜನರು ಹೆಚ್ಚಾಗಿ ಮೆಟ್ರೋ ಬಳಕೆ ಮಾಡುತ್ತಿದ್ದಾರೆ. ಬಹುಶಃ ಬೆಳಗ್ಗೆ ಅವರು ಕ್ಯಾಬ್‌ಗಳಲ್ಲಿ ಸಂಚಾರ ನಡೆಸುತ್ತಾರೆ. ಸಂಜೆ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂದಿನ 2 ಅಥವ 3ನೇ ವಾರ ಹಳದಿ ಮಾರ್ಗದಲ್ಲಿ ಬಿಎಂಆರ್‌ಸಿಎಲ್ 4ನೇ ರೈಲು ಸಂಚಾರವನ್ನು ಆರಂಭಿಸಲಿದೆ. ಆಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕ್ಯಾಬ್ ಬಿಟ್ಟು ಮೆಟ್ರೋದಲ್ಲಿ ಪ್ರಯಾಣ ಮಾಡುವ ಕಾರಣ 300 ರಿಂದ 450 ರೂ. ತನಕ ಉಳಿತಾಯವಾಗುತ್ತಿದೆ. ಮೆಟ್ರೋ ಇಳಿದ ಮೇಲೆ ಆಟೋದಲ್ಲಿ ಕಛೇರಿಗೆ ಸುಲಭವಾಗಿ ಸಂಚಾರ ನಡೆಸುತ್ತೇವೆ ಎಂದು ಟೆಕ್ಕಿಯೊಬ್ಬರು ಹೇಳಿದರು.

ಮೆಟ್ರೋ ನಿಲ್ದಾಣಗಳ ಸುತ್ತಲಿನ ಆಟೋಗಳಿಗೆ ಬೇಡಿಕೆ ಸಹ ಹೆಚ್ಚಿದೆ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ. ಹಳದಿ ಮಾರ್ಗದ ಸುತ್ತಲಿನ 5-6 ಕಿ.ಮೀ.ದೂರದಲ್ಲಿರುವ ಮನೆಗಳಿಗೆ ಆಟೋದಲ್ಲಿ ಜನರು ಪ್ರಯಾಣಿಸುತ್ತಾರೆ ಎಂದು ಚಾಲಕರು ಮಾತನಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version