Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ: ಸಂಯುಕ್ತ ಕರ್ನಾಟಕ ನೂತನ ಕಚೇರಿ ಉದ್ಘಾಟನೆ ಇಂದು

ಹುಬ್ಬಳ್ಳಿ: ಸಂಯುಕ್ತ ಕರ್ನಾಟಕ ನೂತನ ಕಚೇರಿ ಉದ್ಘಾಟನೆ ಇಂದು

0

ಹುಬ್ಬಳ್ಳಿ: ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಪತ್ರಿಕಾಲಯದ ನೂತನ ಕಚೇರಿ ಉದ್ಘಾಟನಾ ಸಮಾರಂಭವು ಇಲ್ಲಿನ ವಿದ್ಯಾನಗರದ `ಸ್ಟೆಲ್ಲರ್ ಮಾಲ್’ನಲ್ಲಿ ಶನಿವಾರ (ಅ. 11) ಬೆಳಿಗ್ಗೆ 10ಕ್ಕೆ ನಡೆಯಲಿದೆ.

ಈ ಸಮುಚ್ಚಯದ ಎರಡನೇ ಮಹಡಿಯ ಸ್ವಂತ ಆವರಣದಲ್ಲಿ ಕಾರ್ಯಾರಂಭ ಮಾಡಲಿರುವ ನೂತನ ಕಚೇರಿಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಅವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ, ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಜಗದೀಶ ಶೆಟ್ಟರ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅವಳಿನಗರ ಹಾಗೂ ಜಿಲ್ಲೆಯ ಶಾಸಕರು, ಮೇಯರ್ ಮತ್ತು ಉಪಮೇಯರ್, ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.

ಉಪನ್ಯಾಸ: ಉದ್ಘಾಟನಾ ಕಾರ್ಯಕ್ರಮದ ನಂತರ ಉಪನ್ಯಾಸಗಳು ಏರ್ಪಾಡಾಗಿವೆ. ಪತ್ರಿಕೆಯ ನಿವೃತ್ತ ಸಂಪಾದಕ ಮನೋಜಗೌಡ ಪಾಟೀಲ ಅವರು ಸ್ವಾತಂತ್ರ್ಯ ಹೋರಾಟ ಮತ್ತು ಸಂಯುಕ್ತ ಕರ್ನಾಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ. ಜಿ.ಬಿ.ಶಿವರಾಜ್ ಅವರು ಪ್ರಸಕ್ತ ಕಾಲಘಟ್ಟದಲ್ಲಿ ಗಾಂಧೀಜಿ ವಿಚಾರಧಾರೆ ಕುರಿತು ಉಪನ್ಯಾಸ ನೀಡುವರು.

ಲೋಕ ಶಿಕ್ಷಣ ಟ್ರಸ್ಟ್ನ ಧರ್ಮದರ್ಶಿಗಳಾದ ಯು.ಬಿ.ವೆಂಕಟೇಶ, ಡಾ. ಗುರುರಾಜ ಕರಜಗಿ, ಕೇಶವ ದೇಸಾಯಿ, ಡಿ.ಆರ್.ಪಾಟೀಲ ಹಾಗೂ ಪತ್ರಿಕೆಯ ಸಿಬ್ಬಂದಿ ಭಾಗವಹಿಸಲಿದ್ದಾರೆ.

ಕೊಪ್ಪೀಕರ್‌ ರಸ್ತೆಯಿಂದ ಆರಂಭವಾದ ಪಯಣ: `ಸಂಯುಕ್ತ ಕರ್ನಾಟಕ’ಕ್ಕೆ ಹುಬ್ಬಳ್ಳಿ ಕರ್ಮಭೂಮಿ. ಹುಬ್ಬಳ್ಳಿಯ ಕೊಪ್ಪೀಕರ್ ರಸ್ತೆಯಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಪತ್ರಿಕಾಲಯ ಕಾರ್ಯನಿರ್ವಹಿಸುತ್ತಿತ್ತು. ಆಧುನಿಕ ಅವಶ್ಯಕತೆಗಳು ಹಾಗೂ ಚಲನಶೀಲತೆಯ ತತ್ವಗಳನ್ನು ಒಳಗೊಂಡು ಈಗ ಹುಬ್ಬಳ್ಳಿ ವಿದ್ಯಾನಗರದ ಸ್ಟೆಲ್ಲರ್ ಮಾಲ್‌ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ.

ಪತ್ರಿಕೆಯ ಅಡಿಪಾಯ ತತ್ವಗಳಾದ ರಾಷ್ಟ್ರಿಯತೆ, ರಾಜ್ಯ ಹಿತಾಸಕ್ತಿ, ಭಾಷೆ-ನೆಲ-ಜಲಗಳಿಗೆ ಬದ್ಧತೆ ಹಾಗೂ ಸಮಸ್ತರ ಅಭಿವೃದ್ಧಿ ಇವೇ ಮೌಲಿಕ ಅಂಶಗಳನ್ನು ಇಟ್ಟುಕೊಂಡು ಆಧುನಿಕ, ರಚನಾತ್ಮಕ ಆಶೋತ್ತರಗಳನ್ನು ನೂತನ ಕಚೇರಿಯ ಮೂಲಕ ಪತ್ರಿಕೆ ಇನ್ನಷ್ಟು ಪ್ರಖರವಾಗಿ ಉಣಬಡಿಸಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version