ನವದೆಹಲಿ: ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಕಂಪನಿಯ ಐಪಿಒ ಬಿಡುಗಡೆಯ ವೇಳೆಗೆ ಅದರ ಈಕ್ವಿಟಿ ಮೌಲ್ಯವು ಸುಮಾರು ₹12.99 ಲಕ್ಷ ಕೋಟಿ ತಲುಪುವ ಸಾಧ್ಯತೆಯಿದೆ ಎಂದು ಐಸಿಐಸಿಐ ಸೆಕ್ಯೂರಿಟೀಸ್ ವರದಿ ತಿಳಿಸಿದೆ.
ಹಣಕಾಸು ವರ್ಷ 2027ರ ಸೆಪ್ಟೆಂಬರ್ ವೇಳೆಗೆ ಕಂಪನಿಯ ಈಕ್ವಿಟಿ ಮೌಲ್ಯವನ್ನು ಸುಮಾರು 14,800 ಕೋಟಿ ಅಮೆರಿಕನ್ ಡಾಲರ್ (ಸುಮಾರು ₹12,99,640 ಕೋಟಿ) ಎಂದು ಅಂದಾಜಿಸಲಾಗಿದೆ. ಈ ಮೌಲ್ಯಮಾಪನವು ಕಂಪನಿಯ ಬಲವಾದ ಹಣಕಾಸು ಮೂಲಗಳು, 5ಜಿ ಅಳವಡಿಕೆಯಲ್ಲಿ ಪ್ರಗತಿ ಹಾಗೂ ಸುಧಾರಿತ ದರ ರಚನೆಯಿಂದ ಪ್ರೇರಿತವಾಗಿದೆ ಎಂದು ವರದಿ ಹೇಳಿದೆ.
ಜಿಯೋ ಪ್ಲಾಟ್‌ಫಾರ್ಮ್ಸ್‌ನ ಲಿಸ್ಟಿಂಗ್ ದೇಶದ ಬಂಡವಾಳ ಮಾರುಕಟ್ಟೆಗಳ ಇತಿಹಾಸದಲ್ಲಿಯೇ ಅತಿದೊಡ್ಡ ಐಪಿಒ ಆಗುವ ನಿರೀಕ್ಷೆ ಇದೆ. ಕಂಪನಿ 2026ರ ಮೊದಲಾರ್ಧದಲ್ಲಿ ಷೇರು ಮಾರುಕಟ್ಟೆ ಪ್ರವೇಶಕ್ಕೆ ಸಜ್ಜಾಗುತ್ತಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ವಾರ್ಷಿಕ ಷೇರುದಾರರ ಸಭೆಯಲ್ಲಿ ಮಾತನಾಡಿ, “ಜಿಯೋ ಐಪಿಒ ಎಲ್ಲ ಹೂಡಿಕೆದಾರರಿಗೆ ಆಕರ್ಷಕ ಅವಕಾಶವಾಗಲಿದೆ,” ಎಂದು ಹೇಳಿದ್ದರು.
ಪ್ರಸ್ತುತ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಕಂಪನಿಯ ಶೇ. 66.3ರಷ್ಟು ಪಾಲನ್ನು ಹೊಂದಿದೆ. ಉಳಿದ ಶೇ. 33ರಷ್ಟು ಪಾಲು ಫೇಸ್‌ಬುಕ್ (ಮೆಟಾ), ಗೂಗಲ್, ಕೆಕೆಆರ್, ವಿಸ್ಟಾ ಈಕ್ವಿಟಿ, ಮುಬದಲಾ, ಸೌದಿ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ ಸೇರಿದಂತೆ 13 ಹೂಡಿಕೆದಾರರ ಕೈಯಲ್ಲಿ ಇದೆ. ಫೇಸ್‌ಬುಕ್ ಶೇ. 10ರಷ್ಟು, ಗೂಗಲ್ ಶೇ. 7.7ರಷ್ಟು ಪಾಲನ್ನು ಹೊಂದಿವೆ.
ಐಸಿಐಸಿಐ ಸೆಕ್ಯೂರಿಟೀಸ್ ವರದಿಯ ಪ್ರಕಾರ, “ಜೆಪಿಎಲ್ ಐಪಿಒ ಪ್ರೀಮಿಯಂ ಮೌಲ್ಯಮಾಪನಗಳಲ್ಲಿ ಬರಬಹುದು ಎಂದು ನಾವು ನಿರೀಕ್ಷಿಸುತ್ತೇವೆ,” ಎಂದು ಉಲ್ಲೇಖಿಸಿದೆ.