ಮಂಗಳೂರು: ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಪಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ. ಐಪಿಎಸ್ ಅಧಿಕಾರಿ ಪ್ರಣವ ಮೊಹಾಂತಿ ನೇತೃತ್ವದ ತಂಡ ಧರ್ಮಸ್ಥಳದಲ್ಲಿ ತನಿಖೆ ಚುರುಕುಗೊಳಿಸಿದೆ.
ಈಗ ಕರ್ನಾಟಕದ ಪೊಲೀಸ್ ಇಲಾಖೆ ಈ ಎಸ್‌ಐಟಿಗೆ ದೂರು ನೀಡಲು ವಿಳಾಸ, ದೂರವಾಣಿ ಸಂಖ್ಯೆಯನ್ನು ನೀಡಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 39/2025, ಕಲಂ: 311(ಎ) BNS ಪ್ರಕರಣದ ತನಿಖೆಗಾಗಿ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ ಎಂದು ಹೇಳಿದೆ.
ವಿಶೇಷ ತನಿಖಾ ತಂಡವು ಮಂಗಳೂರು ನಗರದಲ್ಲಿ ಕಚೇರಿಯನ್ನು ಸ್ಥಾಪಿಸಿರುತ್ತದೆ. ಈ ಪ್ರಕರಣದ ಬಗ್ಗೆ ಎಸ್‌ಐಟಿಯನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು ಎಸ್‌ಐಟಿ ತಂಡವನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.
ಎಸ್‌ಐಟಿ ಕಚೇರಿ ವಿಳಾಸ: ನಿರೀಕ್ಷಣಾ ಮಂದಿರ, ಮಲ್ಲಿಕಟ್ಟೆ, ಕದ್ರಿ, ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ. ದೂರು ನೀಡುವ ಸಮಯ ಬೆಳಗ್ಗೆ 10 ರಿಂದ ಸಂಜೆ 5. ದೂರವಾಣಿ ಸಂಖ್ಯೆಗಳು. 0824-2005301, ವಾಟ್ಸಪ್ ಸಂಖ್ಯೆ 8277986369, ಇ-ಮೇಲ್ ವಿಳಾಸ: sitdps@ksp.gov.in.
ಅನಾಮಿಕ ವ್ಯಕ್ತಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿದ್ದ. ಈ ಕುರಿತು ನ್ಯಾಯಾಲಯದ ಮುಂದೆ ಸಹ ಹೇಳಿಕೆ ದಾಖಲು ಮಾಡಿದ್ದ. ಆದ್ದರಿಂದ ಈ ಕುರಿತು ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು.
ಅಂತಿಮವಾಗಿ ಸರ್ಕಾರ ಎಸ್‌ಐಟಿ ರಚಿಸಿ ಆದೇಶಿಸಿತ್ತು. ಆದೇಶದಲ್ಲಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅವರ ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ಕೈಗೊಳ್ಳಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ, ಆದೇಶಿಸಿದೆ ಎಂದು ಹೇಳಿತ್ತು.
ಈ ಎಸ್‌ಐಟಿ ಮುಖ್ಯಸ್ಥರು ಡಾ. ಪ್ರಣವ ಮೊಹಾಂತಿ ಐಪಿಎಸ್. ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.
ಸದಸ್ಯರು. ಎಂ.ಎನ್.ಅನುಚೇತ್, ಐಪಿಎಸ್. ಉಪ ಪೊಲೀಸ್ ಮಹಾ ನಿರೀಕ್ಷಕರು, ನೇಮಕಾತಿ, ಬೆಂಗಳೂರು. ಸೌಮ್ಯಲತಾ, ಐಪಿಎಸ್. ಉಪ ಪೊಲೀಸ್ ಆಯುಕ್ತರು, ಸಿಎಆರ್ ಕೇಂದ್ರಸ್ಥಾನ, ಬೆಂಗಳೂರು ನಗರ. ಜಿತೇಂದ್ರ ಕುಮಾರ ದಯಾಮ, ಐಪಿಎಸ್. ಪೊಲೀಸ್ ಅಧೀಕ್ಷಕರು, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.
9 ಪೊಲೀಸರ ನೇಮಕ: ಕರ್ನಾಟಕ ಸರ್ಕಾರ ಎಸ್‌ಐಟಿಗೆ ವಿವಿಧ ಹುದ್ದೆಗಳ 20 ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿತ್ತು. ಗುರುವಾರ ಮತ್ತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 9 ಅಧಿಕಾರಿಗಳನ್ನು ನೇಮಿಸಿದ್ದು, ಮುಂದಿನ ಆದೇಶದ ತನಕ ಎಸ್‌ಐಟಿ ಜೊತೆ ಕೆಲಸ ಮಾಡಿ ಎಂದು ಸೂಚನೆ ನೀಡಿದೆ. ಅಲ್ಲದೇ ಎಸ್ಐಟಿ ತನಿಖೆ ನಡೆಸುವ ವೇಳೆ ಅನಾಮಿಕ ವ್ಯಕ್ತಿ, ತನಿಖೆ ನಡೆಸುವ ಸ್ಥಳಗಳಲ್ಲಿ ನಕ್ಸಲ್ ನಿಗ್ರಹ ಪಡೆಯಲ್ಲಿದ್ದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.