ಗ್ಯಾರಂಟಿ ವೆಚ್ಚ ದೊಡ್ಡದು, ಆದರೆ ಅಭಿವೃದ್ಧಿಗೆ ಧಕ್ಕೆ ಇಲ್ಲ: ಒಳಮೀಸಲಾತಿ 9ನೇ ಶೆಡ್ಯೂಲ್‌ಗೆ ಸೇರಿಸಲಿ – ಸತೀಶ್ ಜಾರಕಿಹೊಳಿ ಒತ್ತಾಯ
ದಾವಣಗೆರೆ: ಒಳಮೀಸಲಾತಿ ವಿಚಾರ ಸದ್ಯ ನ್ಯಾಯಾಲಯದ ಅಂಗಳದಲ್ಲಿರುವುದರಿಂದ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಇರುವಾಗ ಸರ್ಕಾರದ ಹಸ್ತಕ್ಷೇಪಕ್ಕೂ ಮಿತಿಯಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಒಳಮೀಸಲಾತಿಯನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರ್ಪಡೆ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಲಹೆ ನೀಡಿದ್ದಾರೆ.
ಹರಿಹರ ತಾಲ್ಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ರಮ ಕೈಗೊಳ್ಳುವುದರಿಂದ ಮಾತ್ರ ಪ್ರಸ್ತುತ ಗೊಂದಲಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: CM ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ಸ್ಪಷ್ಟನೆ ಅಗತ್ಯ: ಸತೀಶ್ ಜಾರಕಿಹೊಳಿ
42 ಸಾವಿರ ನೇಮಕಾತಿ ಬಾಕಿ : ರಾಜ್ಯದಲ್ಲಿ ಸುಮಾರು 42 ಸಾವಿರ ಹುದ್ದೆಗಳ ನೇಮಕಾತಿ ನೋಟಿಫಿಕೇಷನ್ ಬಾಕಿಯಿದೆ. ಪ್ರತಿ ವರ್ಷವೂ ಸಾವಿರಾರು ಹುದ್ದೆಗಳು ಖಾಲಿಯಾಗುತ್ತಿವೆ. ಆಡಳಿತ ಯಂತ್ರ ಸುಗಮವಾಗಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ಅವಶ್ಯಕವಾಗಿದೆ. ಹೀಗಾಗಿ ಅತಂತ್ರ ಸ್ಥಿತಿಯಲ್ಲಿ ಕಾಯುವ ಬದಲು ಹಳೆಯ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಷ್ಟನೆ : ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂಬ ಉಪಮುಖ್ಯಮಂತ್ರಿಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 60 ಸಾವಿರ ಕೋಟಿ ರೂಪಾಯಿ ವೆಚ್ಚ ದೊಡ್ಡ ಮೊತ್ತವೇ ಸರಿ. ಆದರೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ: KIADB ಸ್ಥಳಾಂತರ ಸ್ಥಗಿತ: ಪಾಟೀಲರ ನಿರ್ಧಾರಕ್ಕೆ ಜೋಶಿ ಅಭಿನಂದನೆ
ಕಾನೂನು ಸುವ್ಯವಸ್ಥೆ ಪ್ರಶ್ನೆ : ರಾಜ್ಯದಲ್ಲಿ ಹಿಂದೂಗಳಿಗೆ ಸುರಕ್ಷತೆ ಇಲ್ಲ ಎಂಬ ಬಿಜೆಪಿ ನಾಯಕರ ಆರೋಪವನ್ನು ತಳ್ಳಿಹಾಕಿದ ಜಾರಕಿಹೊಳಿ, ಕಾನೂನು ಸುವ್ಯವಸ್ಥೆ ಸರ್ಕಾರದ ಹಿಡಿತದಲ್ಲಿದೆ. ಜನರನ್ನು ತಪ್ಪು ದಾರಿಗೆ ಎಳೆಯಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ದೇಶದಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿರುಗೇಟು ನೀಡಿದರು.
ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ : ಇದೇ ವೇಳೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.