Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ರೈತರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ

ದಾವಣಗೆರೆ ರೈತರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ

0

ದಾವಣಗೆರೆ ರೈತರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಆಹಾರ ಧಾನ್ಯಗಳ ಖರೀದಿಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಜೋಳ, ರಾಗಿ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಲಿದ್ದು, ರೈತರ ಅನುಕೂಲಕ್ಕಾಗಿ ಬೆಂಬಲ ಎಷ್ಟು? ಎಂದು ಸಹ ಘೋಷಣೆ ಮಾಡಲಾಗಿದೆ.

2025-26ನೇ ಸಾಲಿನ ಋತುವಿನಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಸಂಬಂಧಿಸಿದಂತೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಜೋಳ, ರಾಗಿ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು” ಎಂದು ತಿಳಿಸಿದರು.

ಜೋಳದಲ್ಲಿ ಬಿಳಿಜೋಳ ಹೈಬ್ರೀಡ್ ಕ್ವಿಂಟಾಲ್‍ಗೆ ರೂ.3699 ಮತ್ತು ಬಿಳಿಜೋಳ ಮಾಲ್ದಂಡಿ ಕ್ವಿಂಟಾಲ್‍ಗೆ ರೂ.3749ಗಳ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತದೆ. ಇದಕ್ಕಾಗಿ 2025ರ ಡಿಸೆಂಬರ್ 1 ರಿಂದ 2026ರ ಮಾರ್ಚ್ 31ರ ವರೆಗೆ ರೈತರಿಂದ ನೋಂದಣಿ ಮಾಡಿ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಲಾಗುತ್ತದೆ. ಪ್ರತಿ ರೈತರಿಂದ ಹಿಡುವಳಿಯನ್ನಾಧರಿಸಿ ಪ್ರತಿ ಎಕರೆಗೆ 15 ಕ್ವಿಂಟಾಲ್‍ನಂತೆ ಗರಿಷ್ಠ 150 ಕ್ವಿಂಟಾಲ್ ಬಿಳಿಜೋಳ ಖರೀದಿ ಮಾಡಲಾಗುತ್ತದೆ ಎಂದರು.

ರಾಗಿಯ ಬೆಂಬಲ ಬೆಲೆ: ರಾಗಿಯನ್ನು ಕ್ವಿಂಟಾಲ್‍ಗೆ ರೂ.4886ಗಳ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಿದ್ದು 2025ರ ಅಕ್ಟೋಬರ್ 1 ರಿಂದ ಡಿಸೆಂಬರ್ 15ರವರೆಗೆ ರೈತರಿಂದ ನೋಂದಣಿ ಆರಂಭವಾಗಲಿದೆ.

ನೋಂದಣಿಯಾದ ರೈತರಿಂದ 2026ರ ಜನವರಿ 1 ರಿಂದ ಮಾರ್ಚ್ 31ರ ವರೆಗೆ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಲಾಗುತ್ತದೆ. ಪ್ರತಿ ರೈತರಿಂದ ಹಿಡುವಳಿಯನ್ನಾಧರಿಸಿ ಎಕರೆಗೆ 10 ಕ್ವಿಂಟಾಲ್‍ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡಲಾಗುತ್ತದೆ.

ಭತ್ತದ ಬೆಂಬಲ ಬೆಲೆ: ಸಾಮಾನ್ಯ ತಳಿ ಭತ್ತ ಕ್ವಿಂಟಾಲ್‍ಗೆ ರೂ.2369 ಮತ್ತು ಎ.ಗ್ರೇಡ್ ಭತ್ತ ಕ್ವಿಂಟಾಲ್‍ಗೆ ರೂ.2389ಗಳಂತೆ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿ ಮಾಡಲಾಗುತ್ತದೆ.

ರೈತರ ನೋಂದಣಿ ಆರಂಭವಾಗಿದ್ದು ಅಕ್ಟೋಬರ್ 31ರವರೆಗೆ ನೋಂದಣಿ ಮಾಡಿ 2025ರ ನವೆಂಬರ್ 1 ರಿಂದ 2026ರ ಫೆಬ್ರವರಿ 28ರ ವರೆಗೆ ಖರೀದಿ ಮಾಡಲಾಗುತ್ತದೆ. ಪ್ರತಿ ರೈತರಿಂದ ಹಿಡುವಳಿಯನ್ನಾಧರಿಸಿ ಎಕರೆಗೆ 25 ಕ್ವಿಂಟಾಲ್‍ನಂತೆ ಗರಿಷ್ಠ 50 ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗುತ್ತದೆ.

ಖರೀದಿ ಮಾಡಿದ ರೈತರಿಗೆ ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ರೈತರಿಗೆ ನೊಂದಣಿಗೆ ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಡಲು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಸಿದ್ದತೆ ನಡೆಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಆಹಾರ ಇಲಾಖೆ ಅಧಿಕಾರಿಗಳು ಖರೀದಿ ಕೇಂದ್ರಗಳ ನೋಡಲ್ ಅಧಿಕಾರಿಗಳಾಗಿರುತ್ತಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version