ದಾವಣಗೆರೆ: ದೆಹಲಿಯ ಕೆಂಪುಕೋಟೆಯ ಜನಸಂದಣಿ ಪ್ರದೇಶದಲ್ಲಿ ಆಗಿರುವ ಬಾಂಬ್ ಸ್ಫೋಟಕ್ಕೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪೆಹಲ್ಗಾಮ್, ಪುಲ್ವಮಾ ನಂತರ ದೆಹಲಿಯ ಪ್ರಮುಖ ಸ್ಥಳ ಕೆಂಪುಕೇಟೆ ಬಳಿಯೂ ಭಯೋತ್ಪಾದಕರ ದಾಳಿ ನಡೆದಿದ್ದು, ಆಪರೇಷನ್ ಸಿಂದೂರಕ್ಕೆ ಪ್ರತ್ಯುತ್ತರವಾಗಿ ದಾಳಿ ನಡೆಸಿರುವ ಸಂದೇಶ ಇದಾಗಿದೆ. ಕೇಂದ್ರದ ಗೃಹ ಇಲಾಖೆ ಎಚ್ಚೆತ್ತುಕೊಂಡು ಭಯೋತ್ಪಾದಕ ಚಟುವಟಿಕೆಗಳ ಸದೆ ಬಡೆದು, ಜನರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕೆಂಪುಕೋಟೆ ಬಳಿ ಐದು ಧರ್ಮದ ಮಂದಿರಗಳಿವೆ. ಅಲ್ಲಿ ಎಲ್ಲಾ ಧರ್ಮದವರು ಭೇಟಿ ನೀಡಿರುವುದರಿಂದ ಸಹಜವಾಗಿ ಜನಸಂದಣಿ ಇರುತ್ತದೆ. ಹಾಗಾಗಿ, ಕೇಂದ್ರದ ಗೃಹ ಇಲಾಖೆ ಜನರ ರಕ್ಷಣೆಗಾಗಿ ಭಯೋತ್ಪಾದಕ ಚಟುವಟಿಕೆಗಳ ನಿಗ್ರಹಕ್ಕೆ ಕ್ರಮ ವಹಿಸಬೇಕೆಂದು ಅವರು ಒತ್ತಾಯಿಸಿದರು.
