ದಾವಣಗೆರೆ: ಇಲ್ಲಿ ನಾವ್ಯಾರೂ ಶಾಶ್ವತವಂತೂ ಅಲ್ಲ. ಶಾಸಕ ಪ್ರದೀಪ ಈಶ್ವರ-ಮಾಜಿ ಸಂಸದ ಪ್ರತಾಪ ಸಿಂಹ ಇಬ್ಬರಲ್ಲೂ ಮನವಿ ಮಾಡುತ್ತೇನೆ. ಈ ಇಬ್ಬರೂ ಯುವ ರಾಜಕಾರಣಿಗಳು. ಇನ್ನೂ ಬಹಳ ದೂರ ಹೋಗುವುದಿದೆ. ಯಾರು ಸರಿ, ಯಾರು ತಪ್ಪು ಅಂತಾ ಹೇಳುವುದರಲ್ಲಿ ಅರ್ಥವೇ ಇಲ್ಲ. ನಿಮ್ಮಿಬ್ಬರ ವೈಮನಸ್ಸನ್ನು ತಿಳಿಗೊಳಿಸಿಕೊಳ್ಳಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಸಲಹೆ ನೀಡಿದರು.
ನಗರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆಯೇ ಹೊರತು ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡುತ್ತಾ ಕಾಲಹರಣ ಮಾಡುವುದರಲ್ಲಿ ಯಾವುದೇ ಉಪಯೋಗವಿಲ್ಲ. ಆದ್ದರಿಂದ ನೀವಿಬ್ಬರು ಈ ತರಹದ ಹೇಳಿಕೆ ನೀಡುವುದೂ ಸರಿಯಲ್ಲ. ನಾನು ಸಹೋದರನಾಗಿ ನಿಮ್ಮಿಬ್ಬರಿಗೂ ಮನವಿ ಮಾಡುತ್ತೇನೆ. ಯಾರೇ ಆಗಿರಲಿ ವೈಯಕ್ತಿಕ ವಿಚಾರ ಮಾತನಾಡುವುದು ಸರಿಯಲ್ಲ ಎಂದರು.
ಸಂಪುಟ ಪುನರ್ ರಚನೆ ನಿಶ್ಚಿತ: ರಾಜ್ಯ ಸಚಿವ ಸಂಪುಟ ಬಹುಶಃ ಪುನರ್‌ರಚನೆಯಾಗಲಿದ್ದು, ಕೆಲವು ಸಚಿವರನ್ನೂ ಸಂಪುಟದಿಂದ ಕೈಬಿಡುವುದಂತೂ ನಿಜ. ಯಾವುದೇ ಪೂರ್ಣ ಪ್ರಮಾಣದ ಸರ್ಕಾರವಿದ್ದಾಗ ಸಂಪುಟ ಪುನರ್‌ರಚನೆ ಆಗಿಯೇ ಆಗುತ್ತದೆ. ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಏನು ಮಾನದಂಡ ಹಾಕುತ್ತಾರೋ ಗೊತ್ತಿಲ್ಲ. ಆದರೆ, ಸಂಪುಟ ಪುನರ್‌ರಚನೆಯಾಗುತ್ತದೆ ಎಂದರು.
ನವೆಂಬರ್ ಕ್ರಾಂತಿ ಅಂತಾ ಏನೇನೂ ಇಲ್ಲ. ಅದೆಲ್ಲಾ ಬರೀ ಚರ್ಚೆಗಳಷ್ಟೇ. ನನಗೆ ಅದರ ಬಗ್ಗೆ ಗೊತಿಲ್ಲ. ನಾನೊಬ್ಬ ಅಮಾಯಕ. ಸಿಎಂ ಬದಲಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದರು.
ಬಹುಶಃ ಬಿಹಾರ ಚುನಾವಣೆಯ ನಂತರ ಪ್ರಧಾನ ಮಂತ್ರಿ ಬದಲಾವಣೆಯಾಗಬಹುದು. ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆಂಬುದು ಗೊತ್ತು. ಅದಕ್ಕಾಗಿಯೇ ಎಲ್ಲರ ಖಾತೆಗೆ 10 ಸಾವಿರ ರೂ.,ನಂತೆ 7.5 ಸಾವಿರ ಕೋಟಿ ರೂ.,ಗಳನ್ನು ಹಾಕಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಯಾವುದೇ ಪ್ರಣಾಳಿಕೆಯಲ್ಲಿ ಇಲ್ಲದಿದ್ದರೂ ಎಲ್ಲಾ ಹೆಣ್ಣು ಮಕ್ಕಳ ಖಾತೆಗೆ 10 ಸಾವಿರ ರೂ.,ನಂತೆ ಹಾಕಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳೂ ಇಲ್ಲದೇ ಸೋಲುವ ಭೀತಿಗೆ ಹೀಗೆ ಹೆಣ್ಣು ಮಕ್ಕಳ ಖಾತೆಗೆ ಹಣ ಹಾಕುವ ಕೆಲಸವನ್ನು ಬಿಜೆಪಿ ಸರ್ಕಾರದವರು ಮಾಡುತ್ತಿದ್ದಾರೆ. ಎಲ್ಲಾ ರಾಜ್ಯದವರೂ ನಮ್ಮ ಸ್ಕೀಂ, ಯೋಜನೆಗಳನ್ನೇ ಉಪಯೋಗಿಸುತ್ತಿದ್ದಾರೆ ಎಂದು ಸಂತೋಷ ಲಾಡ್ ತಿಳಿಸಿದರು.
