ದಾವಣಗೆರೆ: ಲಿಂಗಾಯತ ಧರ್ಮ ಅಂತಾ ಹೋದರೆ ಮಾತ್ರ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುತ್ತದೆ. ಹೊರತು, ವೀರಶೈವ ಲಿಂಗಾಯತ ಅಂತ ಹೋದರೆ ಇನ್ನೂ ಒಂದು ಶತಮಾನ ಕಳೆದರೂ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಲು ಸಾಧ್ಯವಿಲ್ಲ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಗಂಗಾದೇವಿ ಅಭಿಪ್ರಾಯಿಸಿದ್ದಾರೆ.
ಬಸವ ಬಳಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾತೆ ಮಹಾದೇವಿ ಅವರೇ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮುನ್ನುಡಿ ಬರೆದಿದ್ದರು. ದಶಕಗಳಿಂದಲೂ ಈ ಹೋರಾಟ ನಡೆಯುತ್ತಲೇ ಇದೆ. ವೀರಶೈವ ಲಿಂಗಾಯತ ಅಂತಾದರೆ ನಮಗೆ ಒಂದು ಶತಮಾನ ಕಳೆದರೂ ಪ್ರತ್ಯೇಕ ಧರ್ಮ ಸಿಗುವುದಿಲ್ಲ. ಹಾಗಾಗಿ, ಲಿಂಗಾಯತ ಧರ್ಮ ಅಂತಲೇ ಹೋರಾಟ ಮುಂದುವರೆಸಬೇಕು ಎಂದು ಹೇಳಿದರು.
ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆದೇ ಪಡೆಯುತ್ತೇವೆ ಎಂಬ ಧೈರ್ಯ ಛಲದಿಂದ ಮುನ್ನುಗ್ಗಿದ್ದೇವೆ, ಇದು ಇಂದು ನಿನ್ನೆಯದೆಲ್ಲಾ ಬಹಳ ವರ್ಷಗಳ ಹಿಂದಿನ ಕನಸು ಈಗ ನನಸಾಗುವ ಕಾಲ ಬಂದಿದೆ ಎಂದರು. ರಂಭಾಪುರಿ ಸ್ವಾಮೀಜಿಗಳು ಎಲ್ಲರೂ ಒಂದಾಗೊಣ ಅದು ಆಹ್ವಾನ ನೀಡಿರುವ ಬಗ್ಗೆ ಪ್ರತಿಕ್ರಿಸಿದ ಅವರು, ಬಸವಣ್ಣನವರೇ ಧರ್ಮಗುರು, ಬಸವಣ್ಣನವರ ವಚನಗಳೇ ಧರ್ಮಗ್ರಂಥ ಮತ್ತು ಕೂಡಲಸಂಗಮವೇ ಧರ್ಮಕ್ಷೇತ್ರವೆಂದು ಅವರು ನಂಬಿದಾಗ ಆ ಬಗ್ಗೆ ನಾವು ಯೋಚಿಸುತ್ತೇವೆ ಎಂದರು.
ಬಸವಾದಿ ಶರಣರು ಬೀದರ್‌ನಿಂದ ಹಿಂದೂ ಸಮಾವೇಶವನ್ನು ಮಾಡುತ್ತೇವೆ ಎಂದಿದ್ದಾರೆ. ಶರಣರೆಲ್ಲಾ ಬರಲಿ ಎಂಬ ಉದ್ದೇಶದಿಂದ ಅವರೆಲ್ಲಾ ಮುಖವಾಡ ಹಾಕಿಕೊಂಡಿದ್ದಾರೆ. ಆದರೆ, ಈಗೆಲ್ಲಾ ಶರಣರು ಎಚ್ಚೆತ್ತುಕೊಂಡಿದ್ದಾರೆ. ಮೂವತ್ತು ವರ್ಷಗಳಿಂದೆ ಇರುವ ಪರಿಸ್ಥಿತಿ ಈಗಿಲ್ಲ. ಗುರು, ವಿರಕ್ತರು, ಶರಣರು ಲಿಂಗಾಯತದ ಪರಂಪರೆ ಒಂದಾಗಲು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಂಡಾಗ ಮಾತ್ರ ಒಂದಾಗುತ್ತೇವೆ ಎಂದು ಹೇಳಿದರು.
