Home ನಮ್ಮ ಜಿಲ್ಲೆ ದಾವಣಗೆರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಖಚಿತ: ಸಿ.ಟಿ. ರವಿ ವಿಶ್ವಾಸ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಖಚಿತ: ಸಿ.ಟಿ. ರವಿ ವಿಶ್ವಾಸ

0

ದಾವಣಗೆರೆ: 2023ರ ವಿಧಾನಸಭೆ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯಾಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ. ರವಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ. ನಮ್ಮದು ಸತ್ಯಕ್ಕೆ ಹತ್ತಿರವಾದಂತಹ ಸಮೀಕ್ಷೆ. ಕಾಂಗ್ರೆಸ್ಸಿನವರದ್ದು ಸತ್ಯಕ್ಕಿಂತಲೂ ದೂರವಾಗಿರುವ ಸಮೀಕ್ಷೆಯಾಗಿದೆ ಎಂದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದು ಅಧಿಕಾರಕ್ಕೆ ಬರಲಿದೆ. ತಾವೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದಾಗಿ ಇದೇ ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂತಾ? ಸಿದ್ದರಾಮಯ್ಯ ಮುಖ್ಯಮಂತ್ರಿ ಆದರಾ? ಇನ್ನು 2019ರ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಒಂದು ಸೀಟು ಬರಲ್ಲ ಅಂದಿದ್ದರು. ಆದರೆ, ಎಷ್ಟು ಸೀಟು ಕಾಂಗ್ರೆಸ್-ಜೆಡಿಎಸ್ ಗೆದ್ದಿದ್ದು? ಒಂದೇ ಒಂದು ಸೀಟು ತಾನೇ ಎಂದು ಅವರು ಸಿದ್ದರಾಮಯ್ಯಗೆ ಕೆಣಕಿದರು.
ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆಂದು ಸ್ಪಷ್ಟವಾಗಿ ಮುಂಚೆಯೇ ನಮ್ಮ ಸಮೀಕ್ಷೆಗಳ ಆಧಾರದಲ್ಲಿ ಹೇಳಿದ್ದೇವು. ಅದರಂತೆ ಅಧಿಕಾರಕ್ಕೂ ಬಂದೆವು. ನಮ್ಮ ಪಕ್ಷಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ಇರುವ ವ್ಯತ್ಯಾಸವೇ ಇದು. ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇನ್ನೂ ಹೆಚ್ಚು ಸಂಖ್ಯಾಬಲದೊಂದಿಗೆ ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version