Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಶಾಮನೂರು ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ — ತನಿಖಾ ತಂಡ ಸ್ಥಳ...

ದಾವಣಗೆರೆ: ಶಾಮನೂರು ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ — ತನಿಖಾ ತಂಡ ಸ್ಥಳ ಪರಿಶೀಲನೆ

0

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಕುಟುಂಬದ ವಿರುದ್ಧ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರು ಗಂಭೀರ ಭೂ ಕಬಳಿಕೆ ಆರೋಪ ಮಾಡಿದ್ದಾರೆ. ಚಿಕ್ಕಬಿದರಿ ಗ್ರಾಮದ ಬಳಿ ಬೇನಾಮಿ ಹೆಸರಿನಲ್ಲಿ ಹಳ್ಳ ಮತ್ತು ಸರ್ಕಾರಿ ಭೂಮಿ ಕಬಳಿಕೆಯಾಗಿದೆ ಎಂದು ಶಾಸಕ ಹರೀಶ್ ಆರೋಪಿಸಿದ್ದು, ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರು ಸಂಯುಕ್ತ ಸಮೀಕ್ಷೆ ನಡೆಸಲು ತಂಡವನ್ನು ರಚಿಸಿದ್ದಾರೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕ ನಿಸಾರ್ ಅಹಮ್ಮದ್ ಅವರ ನೇತೃತ್ವದಲ್ಲಿ ಇಂದು ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೂ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ತನಿಖಾ ತಂಡವು ಸ್ಥಳವನ್ನು ವೀಕ್ಷಿಸಿ ಪ್ರಾಥಮಿಕ ವರದಿ ಸಿದ್ಧಪಡಿಸಿ ವಾಪಸ್ಸಾಯಿತು. ಅಧಿಕಾರಿಗಳ ಪ್ರಕಾರ, ನವಂಬರ್ 10, 11, 12 ರಂದು ಅತ್ಯಾಧುನಿಕ DGPS ತಂತ್ರಜ್ಞಾನ ಬಳಸಿ ಪೂರ್ಣ ಸರ್ವೇ ನಡೆಸಲಾಗುವುದು.

ಆದಾಗ್ಯೂ, ಆ ದಿನಗಳಲ್ಲಿ ಮುಖ್ಯಮಂತ್ರಿ ಸಮ್ಮೇಳನ ಕಾರ್ಯಕ್ರಮ ಇರುವುದರಿಂದ, ಸರ್ವೇ ದಿನಾಂಕವನ್ನು ನವಂಬರ್ 4, 5, 6ಕ್ಕೆ ಮುಂದೂಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಇಂದು ನಡೆದ ಸ್ಥಳಪರಿಶೀಲನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದರು. ಪೊಲೀಸರು ಬಿಗಿ ಭದ್ರತೆ ಒದಗಿಸಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಸರ್ವೇ ಸಿದ್ಧತಾ ಕಾರ್ಯ ಮುಗಿಯಿತು.

ಶಾಸಕ ಬಿ.ಪಿ. ಹರೀಶ್ ಅವರು “ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿಗಳನ್ನು ಶಾಮನೂರು ಕುಟುಂಬ ಬೇನಾಮಿ ಹೆಸರಿನಲ್ಲಿ ಕಬಳಿಸಿದೆ. ಜನರ ಹಕ್ಕಿನ ಭೂಮಿಯನ್ನು ಖಾಸಗಿ ಆಸ್ತಿಯಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ. ಸತ್ಯ ಹೊರಬೀಳಬೇಕು” ಎಂದು ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಯಾಗಿ ಶಾಮನೂರು ಕುಟುಂಬದ ಮೂಲಗಳು “ನಾವು ಕಾನೂನುಬದ್ಧವಾಗಿ ಭೂಮಿ ಖರೀದಿಸಿದ್ದೇವೆ, ಯಾವುದೇ ಕಬಳಿಕೆ ಇಲ್ಲ” ಎಂದು ಸ್ಪಷ್ಟನೆ ನೀಡಿವೆ. ತನಿಖಾ ವರದಿ ಹೊರಬೀಳುವವರೆಗೂ ಈ ಪ್ರಕರಣ ರಾಜಕೀಯವಾಗಿ ದೊಡ್ಡ ಚರ್ಚೆಯ ವಿಷಯವಾಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version