ಎಸ್.ಪ್ರತಾಪ್
ಚಾಮರಾಜನಗರ: ರಾಜ್ಯ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಆಧಾರಿತ ಥರ್ಮಲ್ ಕ್ಯಾಮೆರಾ ಅಳವಡಿಕೆ ಮಾಡಿದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯವು 2,800 ಕಿ.ಮೀ. ವಿಸ್ತಾರದಲ್ಲಿ ಚಾಚಿಕೊಂಡಿದ್ದು, ಪ್ರಾಯೋಗಿಕವಾಗಿ ಜಿ.ಎಸ್. ಬೆಟ್ಟ ವಲಯದ ಎತ್ತರದ ಪ್ರದೇಶದಲ್ಲಿ ಈ ನೂತನ ಕ್ಯಾಮೆರಾ ಅಳವಡಿಸಲಾಗಿದೆ.
ಕಾಡು ಪ್ರಾಣಿಗಳ ಮೇಲೆ ನಿಗಾ: ದಿನನಿತ್ಯ ರಾಜ್ಯದ ಒಂದಲ್ಲ ಒಂದು ಭಾಗದಲ್ಲಿ ಕಾಡುಪ್ರಾಣಿಗಳ ಉಪಟಳದ ವರದಿ ಕೇಳಿ ಬರುತ್ತಿದೆ. ನೂರಾರು ಜಾನುವಾರುಗಳು ಹಾಗೂ ಕೆಲವು ರೈತರು ವನ್ಯಪ್ರಾಣಿಗಳ ದಾಳಿಗೆ ಬಲಿಯಾಗಿದ್ದಾರೆ. ರೈತರ ಬೆಳೆ ಹಾನಿಯಾಗುತ್ತಿದೆ. ಪ್ರತೀಕಾರದ ದ್ವೇಷಕ್ಕೆ ಕಾಡು ಪ್ರಾಣಿಗಳು ಸಹ ಬಲಿಯಾಗುತ್ತಿದ್ದು, ಮಾನವ-ವನ್ಯಜೀವಿ ಸಂಘರ್ಷ ತಡೆಯುವುದೇ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ.
ಈ ಹಿನ್ನೆಲೆಯಲ್ಲಿ ನಾಡಿನತ್ತ ಬರುವ ಕಾಡು ಪ್ರಾಣಿಗಳ ಮೇಲೆ ಹದ್ದಿನ ಕಣ್ಣಿಟ್ಟು ಅವುಗಳನ್ನು ಸಕಾಲದಲ್ಲಿ ಹಿಮ್ಮೆಟ್ಟಿಸಲು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹೊಸ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಎಐ ತಂತ್ರಜ್ಞಾನದ ಮೊರೆ ಹೋಗಿರುವ ಬಂಡೀಪುರ ಅರಣ್ಯಾಧಿಕಾರಿಗಳು ಜಿ.ಎಸ್. ಬೆಟ್ಟ ವಲಯದ ಎತ್ತರದ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಎಐ ಹಾಗೂ ಥರ್ಮಲ್ ಜೂಮ್ ಕ್ಯಾಮೆರಾ ಅಳವಡಿಸಿದ್ದಾರೆ.
ಥರ್ಮಲ್ ಟೆಕ್ನಾಲಜಿಯ ಬಳಕೆ: ಎಐ ಹಾಗೂ ಥರ್ಮಲ್ ತಂತ್ರಜ್ಞಾನ ಬಂಡೀಪುರ ಅರಣ್ಯದಲ್ಲಿ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬಾರದಂತೆ ತಡೆದು ಮಾನವ-ಪ್ರಾಣಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ ಎಂದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ಮಾಹಿತಿ ನೀಡಿದ್ದಾರೆ.
ಯಶಸ್ವಿಯಾದ್ರೆ ಬೇರೆ ಕಡೆ ಲಾಗು: ದೇಶದಲ್ಲೇ ಪ್ರಪ್ರಥಮ ಬಾರಿಗೆ ಈ ಪ್ರಯೋಗ ನಡೆಸಲಾಗುತ್ತಿದ್ದು, ಜಿ.ಎಸ್.ಬೆಟ್ಟ ವಲಯದಲ್ಲಿ ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಬಂಡೀಪುರದ ಇತರ ವಲಯಗಳಿಗೂ ಈ ತಂತ್ರಜ್ಞಾನ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ನಿರ್ದೇಶಕ ಪ್ರಭಾಕರ್ ಅವರು ತಿಳಿಸಿದ್ದಾರೆ. ಈ ವ್ಯವಸ್ಥೆ ಯಶ ಕಂಡರೆ ರಾಜ್ಯದಲ್ಲಿರುವ ಮಾನವ-ವನ್ಯಜೀವ ಸಂಘರ್ಷ ಕಡಿಮೆಯಾಗುವುದು ಪಕ್ಕಾ.
ಹೇಗೆ ಕೆಲಸ ಮಾಡುತ್ತೆ?
* ನಾಡಿಗೆ ಬರುವ ಕಾಡು ಪ್ರಾಣಿಗಳನ್ನು 10 ಕಿ.ಮೀಟರ್ ದೂರದಿಂದಲೇ ಗ್ರಹಿಸುತ್ತದೆ
* ನಂತ್ರ ಕೂಡಲೇ ಕಮಾಂಡ್ ಸೆಂಟರ್ಗೆ ಪ್ರಾಣಿಗಳ ಚಿತ್ರ, ಸ್ಥಳದ ಮಾಹಿತಿ ಕಳಿಸುತ್ತೆ
* 360 ಡಿಗ್ರಿ ತಿರುಗುವ ಈ ಎಐ ಕ್ಯಾಮೆರಾ ಪ್ರಾಣಿಗಳ ಸ್ಪಷ್ಟ ಚಿತ್ರಗಳನ್ನು ಸಂಗ್ರಹಿಸುತ್ತೆ
* ಹುಲಿ, ಚಿರತೆ, ಆನೆ ಸಹಿತ ಕಾಡು ಪ್ರಾಣಿಗಳ ಸೆರೆ ಹಿಡಿಯಲು ಸಹಾಯ ಮಾಡುತ್ತೆ
* ರಾತ್ರಿಯ ವೇಳೆಯೂ ಸ್ಪಷ್ಟ ಚಿತ್ರದೊಂದಿಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ