Home ನಮ್ಮ ಜಿಲ್ಲೆ ಬೆಂಗಳೂರು ಗಗನಯಾತ್ರಿ ಶುಭಾಂಶು ಶುಕ್ಲಾ ಜತೆ ಶಾಲಾ ವಿದ್ಯಾರ್ಥಿಗಳ ಸಂವಾದ

ಗಗನಯಾತ್ರಿ ಶುಭಾಂಶು ಶುಕ್ಲಾ ಜತೆ ಶಾಲಾ ವಿದ್ಯಾರ್ಥಿಗಳ ಸಂವಾದ

0

ಬೆಂಗಳೂರು : ಭಾರತದ ಹೆಮ್ಮೆಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಇಂದು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ನಡೆದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿದರು. ಬಾಹ್ಯಾಕಾಶಯಾನದಲ್ಲಿ ಅನುಭವಿಸಿದ ಅದ್ಭುತ ಕ್ಷಣಗಳು, ಎದುರಿಸಿದ ಸವಾಲುಗಳು ಹಾಗೂ ವಿಜ್ಞಾನ ಜ್ಞಾನದ ಮಹತ್ವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಅವರು ಯುವ ಮನಗಳಲ್ಲಿ ವಿಜ್ಞಾನ ಕುತೂಹಲವನ್ನು ಪ್ರಜ್ವಲಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಶುಕ್ಲಾ ಅವರೊಂದಿಗೆ ನೇರವಾಗಿ ಸಂವಾದ ನಡೆಸಿ ತಮ್ಮ ಆಸಕ್ತಿ ಮತ್ತು ಕುತೂಹಲಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ಪ್ರತಿಯೊಂದು ಪ್ರಶ್ನೆಗೆ ಸಂಯಮದಿಂದ ಉತ್ತರ ನೀಡಿದ ಶುಕ್ಲಾ ಅವರು, “ನಾನು ಹೀರೋ ಆಗಿ ಕಾಣಬಹುದು, ಆದರೆ ನನ್ನ ಪ್ರಯಾಣದ ಹಿಂದೆ ಸಾವಿರಾರು ವಿಜ್ಞಾನಿಗಳು, ಇಂಜಿನಿಯರ್‌ಗಳು, ವೈದ್ಯರು ಮತ್ತು ಸಂಶೋಧಕರ ಶ್ರಮವಿದೆ” ಎಂದು ಹೇಳಿದರು.

ಬಾಹ್ಯಾಕಾಶಯಾನ ಎಷ್ಟು ಕಠಿಣ ಮತ್ತು ವೈಜ್ಞಾನಿಕವಾಗಿ ಸೂಕ್ಷ್ಮ ಎಂಬುದರ ಬಗ್ಗೆ ಮಾತನಾಡಿದ ಅವರು, “ಗಗನಯಾನ ಸುಲಭ ಅಲ್ಲ. ಬಾಹ್ಯಾಕಾಶದಲ್ಲಿ ತೂಕರಹಿತ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಗಗನಯಾನದಿಂದ ಮರಳಿದ ನಂತರ ಏಳು ದಿನಗಳವರೆಗೆ ನೇರವಾಗಿ ನಿಲ್ಲುವುದೂ ಕಷ್ಟವಿತ್ತು” ಎಂದು ತಮ್ಮ ಅನುಭವ ಹಂಚಿಕೊಂಡರು.

ತಮ್ಮ ಗಗನಯಾನದ ವೇಳೆ ನಡೆದ ತಾಂತ್ರಿಕ ಬದಲಾವಣೆಗಳ ಬಗ್ಗೆ ವಿವರಿಸುವಾಗ, SpaceX Crew Dragon ಬಗ್ಗೆ ಮಾತಾಡಿದ ಅವರು, “ನಾನು 16–17 ವರ್ಷ ಪೈಲಟ್ ಆಗಿದ್ದರೂ ಟಚ್‌ಸ್ಕ್ರೀನ್ ಮೂಲಕ ವಿಮಾನ ಅಥವಾ ಅಂತರಿಕ್ಷ ನೌಕೆಯನ್ನು ನಿಯಂತ್ರಿಸುವುದು ಇದೇ ಮೊದಲ ಬಾರಿಯಾಗಿದೆ” ಎಂದರು.

ವಿದ್ಯಾರ್ಥಿಗಳಿಗೆ ಪ್ರೇರಣೆಯ ಸಂದೇಶ : ಗಗನಯಾನಿಯಾಗುವ ಕನಸು ಉತ್ತಮ, ಆದರೆ ಒಂದೇ ಗುರಿ ಎನ್ನುವಂತೆ ಯೋಚಿಸಬೇಡಿ. ವಿಜ್ಞಾನದಲ್ಲಿ ಅನೇಕ ದಾರಿಗಳಿವೆ. ನೀವು ಇಂಜಿನಿಯರ್ ಆಗಬಹುದು, ಸಂಶೋಧಕವಾಗಬಹುದು, ವೈದ್ಯರಾಗಬಹುದು — ಪ್ರತಿಯೊಂದು ಪಾತ್ರವೂ ಸಮಾನವಾಗಿ ಮಹತ್ವದದ್ದು ಎಂದರು.

ಕಾರ್ಯಕ್ರಮವನ್ನು ಸಂದರ್ಶಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ಲಾ ಅವರಿಗೆ ಅಭಿನಂದನೆ ಸಲ್ಲಿಸಿ, “ಇಂತಹ ವ್ಯಕ್ತಿಗಳ ಜೀವನಕಥೆಗಳು ನಮ್ಮ ಯುವಜನತೆಗೆ ಪ್ರೇರಣೆ, ಭಾರತೀಯ ವಿಜ್ಞಾನಕ್ಕೆ ಶಕ್ತಿಯಾಗಿದೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಸಚಿವ ಬೋಸರಾಜು, ವಿಜ್ಞಾನಿಗಳು, ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version