ಬೆಂಗಳೂರು: BMTC ಬಸ್ ಚಾಲಕರಿಗೆ ಮಹತ್ವದ ಅಪ್‌ಡೇಟ್ ಒಂದಿದೆ. ಬಸ್ ಚಾಲನೆ ವೇಳೆ ಬಿಎಂಟಿಸಿ ಬಸ್ ಚಾಲಕರು ಮೊಬೈಲ್‌ನಲ್ಲಿ ಮಾತನಾಡಿದರೆ ಹಾಗೂ ಬಸ್ ಚಾಲಕರು ಎರಡು ಸಲ ಅಪಘಾತವೆಸಗಿ, ತಪ್ಪು ಸಾಬೀತಾದರೇ ಕೆಲಸದಿಂದಲೇ ವಜಾ ಮಾಡಲಾಗುತ್ತದೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೊಸ ನಿಯಮ ಇಂದಿನಿಂದಲೇ ಜಾರಿಯಾಗಲಿದೆ. ಮೊದಲ ಸಲ ಅಪಘಾತವೆಸಗಿದ್ದರೇ 6 ತಿಂಗಳು ಅಮಾನತು ಮಾಡುತ್ತೇವೆ. ಅಮಾನತು ಅವಧಿ ಮುಗಿದ ಮೇಲೆ ತರಬೇತಿ ನೀಡಿ ಮತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ. ಮೊದಲ ಸಲ ಅಪಘಾತವೆಸಗಿದೆ ಚಾಲಕರಿಗೆ ಮೂರು ಇನ್ಕ್ರಿಮೆಂಟ್ ಕಡಿತಗೊಳಿಸಲಾಗುತ್ತದೆ. ಎರಡನೇ ಸಲ ಅಪಘಾತವೆಸಗಿದರೆ ಬಿಎಂಟಿಸಿ ಸಂಸ್ಥೆಯಿಂದಲೇ ವಜಾ ಮಾಡಲಾಗುತ್ತದೆ ಎಂದರು.
ಬಿಎಂಟಿಸಿ ಅಪಘಾತಗಳನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ನಿಗಮ ಕೈಗೊಂಡಿದೆ. ಅಪಘಾತಗಳು ಆಗದಂತೆ ತಡೆಯಲು ಪ್ರತಿದಿನ ಡಿಪೋ ಮ್ಯಾನೇಜರ್‌ಗಳು ಸಿಬ್ಬಂದಿಗೆ ಮೀಟಿಂಗ್ ಮಾಡಬೇಕು. ಪ್ರತಿದಿನ ಬಸ್ ತೆಗೆಯುವ ಮೊದಲು ಎಲ್ಲಾ ಸಿಬ್ಬಂದಿಗೆ ಸೇಫ್ ಡ್ರೈವಿಂಗ್ ಬಗ್ಗೆ ತಿಳುವಳಿಕೆ ನೀಡುವುದು ಹಾಗೂ ಅಘಾತಗಳಿಂದಾಗುವ ಪರಿಣಾಮಗಳ ಕುರಿತು ಘಟಕಗಳಲ್ಲಿ ‘ಬದುಕು ಬದುಕಿಸು’ ಹಾಗೂ ಬಸ್ ನಿಲ್ದಾಣಗಳಲ್ಲಿ ‘ಬಸ್ ಬಂತು ಬಸ್’ ಬೀದಿ ನಾಟಕಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಲಾಗಿದೆ.
ಬಿಎಂಟಿಸಿ ಚಾಲಕರ ಒತ್ತಡರಹಿತ ಚಾಲನೆಗಾಗಿ ರಿಯಲ್ ಟೈಂ ಮೇಲೆ ಚಾಲನಾ ಸಮಯವನ್ನು ಪರಿಷ್ಕರಣೆ ಮಾಡಲಾಗುವುದು. ಈಗಾಗಲೇ 2,000 ಅನುಸೂಚಿಗಳಲ್ಲಿ ರನ್ನಿಂಗ್ ಟೈಮ್ ಅನ್ನು ಹೆಚ್ಚಿಸಿ, ಸುತ್ತುವಳಿ ಸಂಖ್ಯೆ ಕಡಿತ ಮಾಡಲಾಗುವುದು. ಬಿಎಂಟಿಸಿ ಬಸ್ ತಲುಪುವ ಸಮಯ ವಿಸ್ತರಣೆ ಮಾಡಲಾಗುವುದು. ಅಪರಾಧರಹಿತ ಚಾಲಕರನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಲಾಗುವುದು.
40 ವರ್ಷ ಮೇಲ್ಪಟ್ಟ ಎಲ್ಲಾ ಬಿಎಂಟಿಸಿ ಚಾಲಕರಿಗೂ ಜಯದೇವದಲ್ಲಿ ತಪಾಸಣೆ ನಡೆಸಲಾಗುವುದು. ಕೆಲ ಚಾಲಕರಿಗೆ ಯೋಗ ತರಬೇತಿ ನೀಡಲಾಗುವುದು. ಪ್ರತಿನಿತ್ಯ 50 ಡಿಪೋಗಳಲ್ಲಿ ಒಂದು ತಿಂಗಳವರೆಗೆ ಮೂರು ಬಾರಿ ಸೇಫ್ ಡ್ರೈವಿಂಗ್ ಬಗ್ಗೆ ಸಿಬ್ಬಂದಿಗೆ ತಿಳುವಳಿಕೆ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಎಲೆಕ್ಟಿಕ್ ಬಸ್ ಚಾಲಕರು ಚಾಲನೆ ವೇಳೆ ಫೋನ್‌ನಲ್ಲಿ ಮಾತಾಡಿದರೇ, ಬಸ್ ಕಂಪನಿಗೆ 5 ಸಾವಿರ ದಂಡ, 15 ದಿನಗಳ ಕಾಲ ಅಮಾನತು ಮಾಡಲಾಗುತ್ತದೆ. ಸೋಮವಾರದಿಂದ ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬಿಎಂಟಿಸಿ 11,835 ಚಾಲಕರಿಗೆ ಮತ್ತೆ ಟ್ರೇನಿಂಗ್ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.