ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಪಬ್‌ವೊಂದರಲ್ಲಿ 2021ರಲ್ಲಿ ನಡೆದ ಆಘಾತಕಾರಿ ಘಟನೆಯೊಂದಕ್ಕೆ ಬೆಂಗಳೂರು ನಗರ II ಜಿಲ್ಲಾ ಗ್ರಾಹಕ ಆಯೋಗ ಇದೀಗ ನ್ಯಾಯ ಒದಗಿಸಿದೆ. ಕಾಕ್ ಟೇಲ್ಗೆ ಬೆಂಕಿ ಹಾಕುವಾಗ ಮಹಿಳೆಯೊಬ್ಬರ ಮುಖ ಸುಟ್ಟು ಹೋಗಿದ್ದ ಘಟನೆಗೆ ಪಬ್‌ನ ನಿರ್ಲಕ್ಷ್ಯವೇ ಕಾರಣ ಎಂದು ಆಯೋಗ ತೀರ್ಪು ನೀಡಿದೆ.
ಈ ಘಟನೆಯಿಂದ ದೈಹಿಕ ಹಾಗೂ ಮಾನಸಿಕ ಆಘಾತಕ್ಕೊಳಗಾಗಿದ್ದ ಸೌಮ್ಯಾ ನಂದಲ್‌ಗೆ ರೂ.1 ಲಕ್ಷ ಪರಿಹಾರ ನೀಡುವಂತೆ ಪಬ್‌ಗೆ ಆದೇಶಿಸಿದೆ. ಈ ತೀರ್ಪು ಗ್ರಾಹಕರ ಹಕ್ಕುಗಳ ರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ. ಘಟನೆ ನಡೆದಿದ್ದು 2021ರ ನವೆಂಬರ್ 20 ರಂದು. ಸೌಮ್ಯಾ ನಂದಲ್ ತಮ್ಮ ಸ್ನೇಹಿತರೊಂದಿಗೆ ಬ್ರಿಗೇಡ್ ರಸ್ತೆಯಲ್ಲಿರುವ ಪಬ್‌ಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಪಬ್ ಮ್ಯಾನೇಜರ್ ಬಳಿ ಬಂದು ಕಾಕ್ ಟೇಲ್ (ಶಾಟ್) ಪ್ರಯತ್ನಿಸುವಂತೆ ಒತ್ತಾಯಿಸಿದ್ದಾರೆ. ಸೌಮ್ಯಾ ಮತ್ತು ಸ್ನೇಹಿತರು ಆರಂಭದಲ್ಲಿ ಬೇಡವೆಂದರೂ, ಮ್ಯಾನೇಜರ್ ಪದೇ ಪದೇ ಒತ್ತಾಯಿಸಿದ್ದರಿಂದ ಅದನ್ನು ಪ್ರಯತ್ನಿಸಲು ಒಪ್ಪಿಕೊಂಡರು. ಈ ಕಾಕ್ ಟೇಲ್ ಅನ್ನು ಕುಡಿಯುವ ಮೊದಲು ಅದಕ್ಕೆ ಬೆಂಕಿ ಹಚ್ಚಿ ಸುಡುವ ಪದ್ಧತಿ ಇತ್ತು.
ಸೌಮ್ಯಾ ಮತ್ತು ಗೆಳೆಯರು ಬೆಂಕಿ ಹಾಕಬೇಡಿ ಎಂದು ಹೇಳಿದರೂ, ಪಬ್ ಸಿಬ್ಬಂದಿ “ಮೇಡಂ, ಇದು ಮಜಾ ಸಿಗುತ್ತದೆ” ಎಂದು ಹೇಳಿ ಬಲವಂತವಾಗಿ ಕಾಕ್ ಟೇಲ್ಗೆ ಬೆಂಕಿ ಹಾಕಿದ್ದಾರೆ. ಸೌಮ್ಯಾ ದೂರಿನ ಪ್ರಕಾರ, ಕಾಕ್ ಟೇಲ್ಗೆ ಬೆಂಕಿ ಹಾಕುವ ಪ್ರಕ್ರಿಯೆಯನ್ನು ಪಬ್ ಸಿಬ್ಬಂದಿ ಸರಿಯಾಗಿ ನಿರ್ವಹಿಸಿಲ್ಲ. ಇದರಿಂದಾಗಿ ಬೆಂಕಿ ಆಕಸ್ಮಿಕವಾಗಿ ಮುಖ ಮತ್ತು ಕೂದಲಿಗೆ ಚೆಲ್ಲಿದೆ.
ಕೂಡಲೇ ಕೂದಲಿಗೆ ಬೆಂಕಿ ಹೊತ್ತಿಕೊಂಡು, ಹಣೆ ಮತ್ತು ಕೆನ್ನೆಗೆ ಹರಡಿದೆ. ಪಬ್ ಸಿಬ್ಬಂದಿ ತಕ್ಷಣ ಬರ್ನ್ ಕ್ರೀಮ್ ಹಚ್ಚಿದರೂ, ಸೌಮ್ಯಾ ಪೂರ್ತಿ ಹಣೆ ಮತ್ತು ಕೆನ್ನೆ ಸುಟ್ಟುಹೋಗಿತ್ತು. ಮರುದಿನ ವೈದ್ಯಕೀಯ ಚಿಕಿತ್ಸೆ ಪಡೆದಾಗ, ಗಾಯಗಳು ತುಂಬಾ ದೊಡ್ಡದಾಗಿದ್ದು, ಗಾಯದ ಕಲೆಗಳು ಮಾಯವಾಗಲು ಮೂರು ತಿಂಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು.
ಈ ಘಟನೆಯಿಂದಾಗಿ ತಮ್ಮ ಆತ್ಮವಿಶ್ವಾಸ, ಸಾಮಾಜಿಕ ಜೀವನ ಮತ್ತು ಕೆಲಸದ ಮೇಲೆ ತೀವ್ರ ಪರಿಣಾಮ ಬೀರಿದ್ದು, ವೈದ್ಯಕೀಯ ಮತ್ತು ಸೌಂದರ್ಯವರ್ಧಕ ಆರೈಕೆಗಾಗಿ ರೂ.5 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಬೇಕಾಯಿತು ಎಂದು ಸೌಮ್ಯಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸೌಮ್ಯಾ ನಂದಲ್ ಪೊಲೀಸ್ ದೂರು ದಾಖಲಿಸುವುದರ ಜೊತೆಗೆ, ಮಾರ್ಚ್ 2023 ರಲ್ಲಿ ಜಿಲ್ಲಾ ಗ್ರಾಹಕ ಆಯೋಗದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು.
ಪಬ್ ಆಡಳಿತವು ತನ್ನ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿತ್ತು. ‘ಶಾಟ್ ಅವರೇ ಕೇಳಿದ್ದು, ಅದನ್ನು ಸರಿಯಾಗಿ ನಿರ್ವಹಿಸದಿರುವುದಕ್ಕೆ ಅವರೇ ಕಾರಣ’ ಎಂದು ಸಮರ್ಥಿಸಿಕೊಂಡಿತ್ತು. ಆದರೆ, ಆಯೋಗವು ಪಬ್‌ನ ಸಿಸಿಟಿವಿ ವಿಡಿಯೋವನ್ನು ಪರಿಶೀಲಿಸಿದಾಗ, ಪಬ್ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂಬುದು ಸ್ಪಷ್ಟವಾಗಿ ಸಾಬೀತಾಯಿತು.
ಕಾಕ್ ಟೇಲ್ ನೀಡುವಾಗ ಗ್ರಾಹಕರಿಗೆ ಸೂಕ್ತ ಎಚ್ಚರಿಕೆ ನೀಡಬೇಕಿದ್ದ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಿದ್ದ ಪಬ್, ಈ ಎರಡರಲ್ಲೂ ವಿಫಲವಾಗಿದೆ ಎಂದು ಆಯೋಗ ತೀರ್ಮಾನಿಸಿತು. ಇದನ್ನು “ಸೇವೆಯಲ್ಲಿನ ಕೊರತೆ” ಎಂದು ಪರಿಗಣಿಸಲಾಯಿತು. ಸೌಮ್ಯಾ ರೂ.10 ಲಕ್ಷ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು.
ಆದರೆ, ಆಯೋಗವು ವೈದ್ಯಕೀಯ ವೆಚ್ಚಗಳು, ಆಘಾತ ಮತ್ತು ಕಾನೂನು ವೆಚ್ಚಗಳಿಗಾಗಿ ಒಟ್ಟು ರೂ.1 ಲಕ್ಷ ಪರಿಹಾರ ನೀಡುವಂತೆ ಪಬ್‌ಗೆ ಆದೇಶಿಸಿದೆ. ಈ ತೀರ್ಪು ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ತಮ್ಮ ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸುವಂತೆ ಎಚ್ಚರಿಕೆ ನೀಡುತ್ತದೆ ಮತ್ತು ಗ್ರಾಹಕ ಹಕ್ಕುಗಳ ರಕ್ಷಣೆಗೆ ಮಾದರಿ ಎನಿಸಿದೆ. ಯಾವುದೇ ನಿರ್ಲಕ್ಷ್ಯದ ಘಟನೆ ನಡೆದರೆ, ಗ್ರಾಹಕರು ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಬಹುದು ಎಂಬುದಕ್ಕೆ ಇದೊಂದು ಪ್ರಮುಖ ಉದಾಹರಣೆಯಾಗಿದೆ.