ಬೆಂಗಳೂರು ನಗರದಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ. ಪ್ರೀತಿಗೆ ನಿರಾಕರಿಸಿದ ಯುವತಿಯೊಬ್ಬಳನ್ನು ಪಾಗಲ್ ಪ್ರೇಮಿಯೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶ್ರೀರಾಮಪುರ ರೈಲ್ವೆ ಹಳಿಗಳ ಬಳಿ ನಡೆದಿದೆ.
ಈ ಕೃತ್ಯದ ಆರೋಪಿ, 21 ವರ್ಷದ ವಿಘ್ನೇಶ್, ಬಿ.ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ (20) ಅವರನ್ನು ಚಾಕುವಿನಿಂದ ಇರಿದು, ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಸದ್ಯ ಆರೋಪಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ನಗರದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.
ಯಾಮಿನಿ ಪ್ರಿಯಾ ತಮ್ಮ ಪೋಷಕರೊಂದಿಗೆ ಶ್ರೀರಾಮಪುರ ಸಮೀಪದ ಸ್ವತಂತ್ರ ಪಾಳ್ಯದಲ್ಲಿ ವಾಸಿಸುತ್ತಿದ್ದರು. ಬನಶಂಕರಿ 3ನೇ ಹಂತದ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮ್ ಓದುತ್ತಿದ್ದ ಯಾಮಿನಿ, ತಮ್ಮ ಮನೆ ಪಕ್ಕದಲ್ಲೇ ವಾಸವಿದ್ದ ವಿಘ್ನೇಶ್‌ಗೆ ಪರಿಚಿತಳಾಗಿದ್ದಳು.
ವಿಘ್ನೇಶ್ ಹಲವು ವರ್ಷಗಳಿಂದ ಯಾಮಿನಿಯನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಆದರೆ ಯಾಮಿನಿಗೆ ಆತನ ಮೇಲೆ ಆಸಕ್ತಿ ಇರಲಿಲ್ಲ. ಆತ ಸದಾ ಆಕೆಯ ಹಿಂದೆ ಬಿದ್ದು ಪ್ರೀತಿಗೆ ಒಪ್ಪುವಂತೆ ಒತ್ತಾಯಿಸುತ್ತಿದ್ದ. ಆದರೆ ಯಾಮಿನಿ ನಿರಂತರವಾಗಿ ಆತನ ಪ್ರೀತಿಯನ್ನು ನಿರಾಕರಿಸುತ್ತಿದ್ದಳು. ಇದೇ ವಿಘ್ನೇಶ್ ಕೋಪಕ್ಕೆ ಕಾರಣವಾಗಿತ್ತು.
ಘಟನೆ ನಡೆದ ದಿನ, ಯಾಮಿನಿ ಎಂದಿನಂತೆ ಬನಶಂಕರಿಯ ತನ್ನ ಕಾಲೇಜಿಗೆ ಪರೀಕ್ಷೆಗಾಗಿ ಹೋಗಿದ್ದಳು. ಆಕೆಯ ದಿನಚರಿಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದ ವಿಘ್ನೇಶ್, ಯಾಮಿನಿ ಕಾಲೇಜಿನಿಂದ ವಾಪಸ್ ಬರುವ ಸಮಯವನ್ನು ನಿಖರವಾಗಿ ಅಂದಾಜಿಸಿದ್ದ.
ಮಧ್ಯಾಹ್ನ 2. 30ರ ಸುಮಾರಿಗೆ ಯಾಮಿನಿ ಶ್ರೀರಾಮಪುರ ಬಸ್ ನಿಲ್ದಾಣದಲ್ಲಿ ಬಸ್‌ನಿಂದ ಇಳಿದಾಗ ವಿಘ್ನೇಶ್ ಅಲ್ಲಿಯೇ ಕಾದು ಕುಳಿತಿದ್ದ. ಯಾಮಿನಿ ರೈಲ್ವೆ ಹಳಿಯ ಪಕ್ಕದ ಕಾಲುದಾರಿಯಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ವಿಘ್ನೇಶ್ ಆಕೆಯನ್ನು ಹಿಂಬಾಲಿಸಿದ.
ಅಲ್ಲಿ ಆತ ಒಂದು ಅಮಾನವೀಯ ಕೃತ್ಯ ಎಸಗಿದ. ಮೊದಲು ಯಾಮಿನಿಯ ಕಣ್ಣುಗಳಿಗೆ ಖಾರದ ಪುಡಿಯನ್ನು ಎರಚಿದ. ಕಣ್ಣು ಉಜ್ಜಿಕೊಳ್ಳುತ್ತಾ, ದಿಕ್ಕು ತೋಚದೆ ಕಂಗಾಲಾಗಿದ್ದ ಯಾಮಿನಿಗೆ ಏನಾಗುತ್ತಿದೆ ಎಂದು ಅರ್ಥವಾಗುವ ಮೊದಲೇ, ವಿಘ್ನೇಶ್ ಚಾಕುವಿನಿಂದ ಆಕೆಯ ಹೊಟ್ಟೆಗೆ ಮೂರ್ನಾಲ್ಕು ಬಾರಿ ಇರಿದ.
ಆಕೆ ಚೀರಾಡುವ ಮೊದಲೇ ಆಕೆಯ ಕತ್ತು ಸೀಳಿದ. ಯಾಮಿನಿ ನೋವಿನಿಂದ ಚೀರಾಡಿದ್ದರಿಂದ ಸ್ಥಳೀಯರು ಧಾವಿಸುವಷ್ಟರಲ್ಲಿ ವಿಘ್ನೇಶ್ ಘಟನಾ ಸ್ಥಳದಿಂದ ಪರಾರಿಯಾಗಿದ್ದನು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯಾಮಿನಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಈ ಪ್ರಕರಣದ ಮತ್ತೊಂದು ಆತಂಕಕಾರಿ ಅಂಶವೆಂದರೆ, ಸುಮಾರು ಆರು ತಿಂಗಳ ಹಿಂದೆಯೇ ವಿಘ್ನೇಶ್ ಯಾಮಿನಿಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಆಕೆಯ ಪೋಷಕರು ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆಗ ಪೊಲೀಸರು ವಿಘ್ನೇಶ್‌ರನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿ, ಮುಂದೆ ಹೀಗೆ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು. ಆದರೆ, ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ವಿಘ್ನೇಶ್ ತನ್ನ ದುಶ್ಚಟವನ್ನು ಬಿಟ್ಟಿರಲಿಲ್ಲ.
ಯಾಮಿನಿ ತಂದೆ ಪೇಂಟರ್ ಆಗಿದ್ದು, ಅವರಿಗೆ ಯಾಮಿನಿ ಸೇರಿದಂತೆ ಇಬ್ಬರು ಮಕ್ಕಳಿದ್ದರು. ಆರೋಪಿ ವಿಘ್ನೇಶ್ ಜಿಮ್ ತರಬೇತುದಾರನಾಗಿದ್ದನು. ಈ ದುರಂತ ಯಾಮಿನಿ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. ಪೊಲೀಸರು ಸದ್ಯ ತಲೆಮರೆಸಿಕೊಂಡಿರುವ ಆರೋಪಿ ವಿಘ್ನೇಶ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.