Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರಿನ ಜನರಿಗೆ ಮಹಾ ದೋಖಾ: 5% ತೆರಿಗೆಯಿಂದ ಮಧ್ಯಮ ವರ್ಗವನ್ನು ಸುಟ್ಟು ಹಾಕುತ್ತಿದೆ ಸರ್ಕಾರ

ಬೆಂಗಳೂರಿನ ಜನರಿಗೆ ಮಹಾ ದೋಖಾ: 5% ತೆರಿಗೆಯಿಂದ ಮಧ್ಯಮ ವರ್ಗವನ್ನು ಸುಟ್ಟು ಹಾಕುತ್ತಿದೆ ಸರ್ಕಾರ

0

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಬಿ ಖಾತಾದಿಂದ ಎ ಖಾತಾ’ ಪರಿವರ್ತನೆಗೆ ಸರ್ಕಾರವು ಶೇ. 5ರಷ್ಟು ತೆರಿಗೆ ವಿಧಿಸುವ ಮೂಲಕ ಬೆಂಗಳೂರಿನ ಜನರಿಗೆ “ಮಹಾ ದೋಖಾ” ಮಾಡುತ್ತಿದೆ ಎಂದು ನಿಖಿಲ್ ಆರೋಪಿಸಿದ್ದಾರೆ.

ದೀಪಾವಳಿ ಶುಭಾಶಯಗಳೊಂದಿಗೆ ಟ್ವೀಟ್ ಮಾಡಿದ ನಿಖಿಲ್, “ನೀವು ದೀಪ ಹಚ್ಚುತ್ತಿರುವಾಗ, ಕಾಂಗ್ರೆಸ್ ಬಿ ಖಾತಾದಿಂದ ಎ ಖಾತಾ ಮಾಡಲು 5% ತೆರಿಗೆಯಿಂದ ಮಧ್ಯಮ ವರ್ಗವನ್ನು ಸುಟ್ಟು ಹಾಕುತ್ತಿದೆ, 7.5 ಲಕ್ಷ ಮನೆ ಮಾಲೀಕರು 100 ದಿನಗಳಲ್ಲಿ ಲಕ್ಷ ಲಕ್ಷ ಪಾವತಿಸುವಂತೆ ಒತ್ತಾಯಿಸುತ್ತಿದೆ” ಎಂದು ಕಿಡಿಕಾರಿದ್ದಾರೆ. ಈ ಕ್ರಮವು ಸುಮಾರು 7.5 ಲಕ್ಷ ಬಿ ಖಾತಾ ಆಸ್ತಿ ಮಾಲೀಕರ ಮೇಲೆ ದೊಡ್ಡ ಆರ್ಥಿಕ ಹೊರೆಯನ್ನು ಹೊರಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಪಕ್ಷವು ಬಿ ಖಾತಾ ಹೊಂದಿರುವವರ ಪರವಾಗಿ ಹೋರಾಡುತ್ತದೆ ಎಂದು ನಿಖಿಲ್ ಭರವಸೆ ನೀಡಿದ್ದಾರೆ. “ನಾವು ಪ್ರತಿಭಟನೆ ಮೂಲಕ ಮತ್ತು ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತೇವೆ. ನಿಮ್ಮ ಹಬ್ಬವನ್ನು ಸಂತೋಷದಿಂದ ಆಚರಿಸಿ, ನಾವು ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ” ಎಂದು  ಹೇಳಿದ್ದಾರೆ. ಈ ಕುರಿತು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಪೂರ್ಣ ವಿವರಗಳನ್ನು ಬಹಿರಂಗಪಡಿಸುವುದಾಗಿ ನಿಖಿಲ್ ಘೋಷಿಸಿದ್ದಾರೆ.

ರಾಜ್ಯ ಸರ್ಕಾರವು ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರು ಜನರ ಜೇಬಿಗೆ ಕೈಹಾಕಿದೆ ಎಂದು ನಿಖಿಲ್ ಆರೋಪಿಸಿದ್ದಾರೆ. ‘ಎ ಖಾತಾ’ ನೆಪದಲ್ಲಿ 15 ಸಾವಿರ ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ಬೆಂಗಳೂರಿನಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಲು ಬಳಸುತ್ತಿದೆ ಎಂದು ದೂರಿದ್ದಾರೆ. ‘ಬಿ ಖಾತಾದಿಂದ ಎ ಖಾತಾಗೆ’ ಪರಿವರ್ತನೆ ಮಾಡುವ ಅರ್ಜಿಗೆ 500 ರೂಪಾಯಿ ಶುಲ್ಕ ವಿಧಿಸಿ, ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಸುಲಿಗೆ ಮಾಡುತ್ತಿದೆ ಎಂದೂ ಅವರು ವಾಗ್ದಾಳಿ ನಡೆಸಿದರು.

ಉದಾಹರಣೆಗೆ, 30×40 ನಿವೇಶನಕ್ಕೆ ಈಗ 4 ರಿಂದ 8 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಹಿಂದೆ ಕೇವಲ 10 ರಿಂದ 13 ಸಾವಿರ ರೂಪಾಯಿ ಮಾತ್ರ ಪಾವತಿಸಬೇಕಿತ್ತು. ಈ ಹೊಸ ನೀತಿಯಿಂದಾಗಿ ಸರ್ಕಾರವು ‘ಎ ಖಾತಾ’ ಪರಿವರ್ತನೆಯ ಮೂಲಕ ಒಟ್ಟು 15 ಸಾವಿರ ಕೋಟಿ ರೂಪಾಯಿಗಳನ್ನು ವಸೂಲಿ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version