ಗ್ರೇಟರ್ ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆಯು ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿರುವ ಹೊತ್ತಲ್ಲೇ ನಗರದ ಶಾಲಾ ಮಕ್ಕಳೂ ರಸ್ತೆ ಗುಂಡಿಗಳಿಂದ ಹತಾಶರಾಗಿ ಪ್ರಧಾನಿ ಕಚೇರಿಗೆ ಕವನ ಬರೆದು ಕಳುಹಿಸಿದ್ದಾರೆ.
ಕನಕಪುರ ರಸ್ತೆಯಲ್ಲಿರುವ ತಲಘಟ್ಟಪುರ ಬಳಿಯ ನ್ಯಾಯಾಂಗ ಬಡಾವಣೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಬರುತ್ತದೆ. ನ್ಯಾಯಾಧೀಶರು, ಸರ್ಕಾರದ ಉನ್ನತ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಹೆಚ್ಚಾಗಿ ವಾಸವಾಗಿರುವ ಈ ಪ್ರತಿಷ್ಠಿತ ಬಡಾವಣೆಯ ಅಕ್ಕಪಕ್ಕದ ನಿವಾಸಿಗಳು ನಿತ್ಯವೂ ರಸ್ತೆ ಗುಂಡಿ ಮತ್ತು ಅವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ ಎಂದು ಬಡಾವಣೆ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಈ ರಸ್ತೆಗಳನ್ನು ನಿರಂತರವಾಗಿ ಅಗೆದು, ಮಣ್ಣಿನಿಂದ ಮುಚ್ಚಿ, ಮಳೆಗಾಲದಲ್ಲಿ ಮತ್ತಷ್ಟು ಹದಗೆಡಲು ಬಿಡಲಾಗಿದೆ. ಇದರಿಂದ ಆಳವಾದ, ನೀರು ತುಂಬಿದ ಗುಂಡಿಗಳು ನಿರ್ಮಾಣವಾಗಿದ್ದು, ಈ ರಸ್ತೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿರುವುದು ಸ್ಥಳೀಯ ಹಿರಿಯರನ್ನು ಮಾತ್ರವಲ್ಲದೆ, ಮಕ್ಕಳಲ್ಲೂ ಸಹ ಆತಂಕ ಸೃಷ್ಟಿಸಿದೆ.
ನಿತ್ಯ ಶಾಲೆಗೆ ತೆರಳುವಾಗ ರಸ್ತೆಯ ಅವ್ಯವಸ್ಥೆ ಮತ್ತವುಗಳ ತಂದೊಡ್ಡಬಹುದಾದ ಅಪಾಯವನ್ನು ಮಕ್ಕಳು ಪದ್ಯದ ರೂಪದಲ್ಲಿ ಅಭಿವ್ಯಕ್ತಿಸುವ ಮೂಲಕ ಆಡಳಿತಗಾರರ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. ಮಕ್ಕಳು ರಚಿಸಿರುವ ಪದ್ಯದಲ್ಲಿ ನಿರಾಸೆ, ಬೇಸರ ಮತ್ತು ಆತಂಕಗಳು ವ್ಯಕ್ತವಾಗಿವೆ. ರಸ್ತೆ ಅವ್ಯವಸ್ಥೆಯ ಕುರಿತು ಪದ್ಯವನ್ನು ರಚಿಸಿದ್ದಲ್ಲದೆ, ಆ ಪದ್ಯವನ್ನು ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಕಳುಹಿಸಿ ತಮ್ಮ ಅಸಹನೆಯನ್ನು ತೋರ್ಪಡಿಸಿದ್ದಾರೆ.
ʼನಮ್ಮ ಕಣ್ಣಿಗೆ ಕಂಡಲ್ಲೆಲ್ಲ ಗುಂಡಿಗಳು, ಹೊಂಡಗಳು, ಕಲ್ಲು ಮತ್ತು ಮಣ್ಣು. ನನ್ನ ತಂದೆ ತೆರಿಗೆ ಪಾವತಿಸುತ್ತಾರೆ.ನಾವು ಪೆಟ್ರೋಲ್, ಕೇಕ್, ನೀರು, ವಿದ್ಯುತ್‌ಗೆ ತೆರಿಗೆ ಪಾವತಿಸುತ್ತೇವೆ. ಆದರೂ, ನಮ್ಮ ರಸ್ತೆಗಳು ಹೀಗೇಕೆ?’ ಎಂದು ಪದ್ಯದಲ್ಲಿ ಮಕ್ಕಳು ಪ್ರಶ್ನಿಸಿದ್ದಾರೆ. ಇದೀಗ ಮಕ್ಕಳು ಬರೆದ ಪದ್ಯದ ವಿಚಾರ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಯ್ಯೋ ಬೆಂಗೂರು ರಸ್ತೆ!: ನಗರ ಖಾಸಗಿ ಶಾಲಾ ಮಕ್ಕಳು ಹೊರಟಿರುವ ಬಸ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿ ‘ಅಯ್ಯೋ ಬೆಂಗಳೂರು ರಸ್ತೆ, ಟ್ರಾಫಿಕ್ ಜಾಮ್ ಬಗ್ಗೆ ತುಂಬಾ ಭಯ ಆಗುತ್ತೆ’ ಎನ್ನುತ್ತಲೇ ರಸ್ತೆ ಗುಂಡಿ ಸಮಸ್ಯೆಗೆ ಸಿಲುಕಿ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದ್ದು, ಇದನ್ನು ಬಿಜೆಪಿ ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡು ಡಿ.ಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಅವರಿಗೆ ನೀವು ಹೇಳಿರುವ ಬ್ರಾಂಡ್ ಬೆಂಗಳೂರು ಮಾದರಿ ಇದೇನಾ ಎಂದು ಪ್ರಶ್ನಿಸಿದ್ದಾರೆ. ರಸ್ತೆ ಗುಂಡಿ, ಟ್ರಾಫಿಕ್‌ನಿಂದ ಶಾಲೆಗೆ ಸರಿಯಾಗಿ ಹೋಗಲು ಆಗುತ್ತಿಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂದು ವಿಡಿಯೊ ಮಾಡಿದ್ದಾರೆ.