ನಮ್ಮ ಮೆಟ್ರೋದ ಹೊಸ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳ ಪೈಕಿ ಕೇವಲ 11 ನಿಲ್ದಾಣಗಳಲ್ಲಿ ಮಾತ್ರ ಪಾರ್ಕಿಂಗ್ ಸೌಲಭ್ಯವಿದೆ. ಈ ಸೀಮಿತ ಪಾರ್ಕಿಂಗ್ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಎಲ್ಲಾ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಸಾಮರ್ಥ್ಯ ವಿಸ್ತರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಪ್ರತಿದಿನ ಲಕ್ಷಾಂತರ ಜನರು ಮೆಟ್ರೋ ರೈಲುಗಳನ್ನು ಬಳಸುತ್ತಾರೆ, ಅದರಲ್ಲಿ ಹಳದಿ ಮಾರ್ಗದಲ್ಲಿ ಸುಮಾರು 60 ರಿಂದ 70 ಸಾವಿರ ಮಂದಿ ಸಂಚರಿಸುತ್ತಾರೆ. ಇವರಲ್ಲಿ ಅನೇಕರು ತಮ್ಮ ವಾಹನಗಳಲ್ಲಿ ನಿಲ್ದಾಣಕ್ಕೆ ಬಂದು ಮೆಟ್ರೋ ಬಳಸುತ್ತಾರೆ. ಆದರೆ, ಸದ್ಯ ಕೇವಲ 11 ನಿಲ್ದಾಣಗಳಲ್ಲಿ ಪಾರ್ಕಿಂಗ್ ಲಭ್ಯವಿದೆ. ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣದಲ್ಲಿ 800 ವಾಹನಗಳ ನಿಲುಗಡೆಗೆ ದೊಡ್ಡ ಪಾರ್ಕಿಂಗ್ ವ್ಯವಸ್ಥೆ ಇದೆ.
ಹಸಿರು ಮತ್ತು ಹಳದಿ ಮಾರ್ಗಗಳನ್ನು ಸಂಪರ್ಕಿಸುವ ಆರ್‌ವಿ ರಸ್ತೆ (ರಾಷ್ಟ್ರೀಯ ವಿದ್ಯಾಲಯ) ನಿಲ್ದಾಣದಲ್ಲಿಯೇ ವಾಹನ ಪಾರ್ಕಿಂಗ್ ಸೌಲಭ್ಯ ಇಲ್ಲ. ಈ ನಿಲ್ದಾಣದಿಂದ ಅನೇಕರು ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಪ್ರಯಾಣಿಸುತ್ತಿರುವುದರಿಂದ ಪಾರ್ಕಿಂಗ್ ಅಗತ್ಯವಿದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರ ಪ್ರಕಾರ, ಭೂ ಸ್ವಾಧೀನದ ವೆಚ್ಚ ಮತ್ತು ಸವಾಲುಗಳಿಂದ ಎಲ್ಲಾ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗಿದೆ. ಉದಾಹರಣೆಗೆ, ಆರ್‌ವಿ ರಸ್ತೆ ನಿಲ್ದಾಣ ನಿರ್ಮಿಸಲು ಉದ್ಯಾನವನದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಾಯಿತು, ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಾಕಷ್ಟು ಕಳಪೆಯಾಗಿದೆ.
ಸುಮಾರು 21% ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯವೇ ಇಲ್ಲ. ಪ್ರತೀ 10,000 ಮೆಟ್ರೋ ಪ್ರಯಾಣಿಕರಿಗೆ ಕೇವಲ 150 ಪಾರ್ಕಿಂಗ್ ಸ್ಥಳಗಳಿವೆ. ಇದು ವಾಹನ ಸವಾರರಿಗೆ ಪ್ರತಿದಿನ ಪಾರ್ಕಿಂಗ್ ಹುಡುಕುವುದು ಕಷ್ಟಕರವಾಗಿಸಿದೆ. ಇದರಿಂದ ಹಲವರು ಮೆಟ್ರೋ ಬಳಸುವ ಬದಲು ತಮ್ಮ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಿದ್ದಾರೆ.
ಪ್ರಸ್ತುತ, ನಮ್ಮ ಮೆಟ್ರೋದ 83 ನಿಲ್ದಾಣಗಳ ಪೈಕಿ ಕೇವಲ 66 ನಿಲ್ದಾಣಗಳಲ್ಲಿ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಇದೆ. ಇಲ್ಲಿ ಒಟ್ಟು 12,700 ಬೈಕ್ ಮತ್ತು 2,300 ಕಾರುಗಳನ್ನು ನಿಲ್ಲಿಸಬಹುದು. ಈ ಸೀಮಿತ ಸ್ಥಳಗಳು ಬೆಂಗಳೂರಿನ ವಾಹನ ದಟ್ಟಣೆಗೆ ಹೋಲಿಸಿದರೆ ತೀರಾ ಕಡಿಮೆ.
ಮೆಟ್ರೋ ಪ್ರಯಾಣಿಕರಾದ ಸುಹಾಸ್ ಕೆ., “ನಮ್ಮ ಮನೆಯಿಂದ (ಬಿಳೇಕಹಳ್ಳಿ) ಜೆ.ಪಿ. ನಗರ ನಿಲ್ದಾಣಕ್ಕೆ ಸುಮಾರು 5 ಕಿ.ಮೀ ದೂರವಿದೆ. ಬಸ್ ಮತ್ತು ಆಟೋ ದರಗಳು ಹೆಚ್ಚಾಗಿವೆ. ಎಲ್ಲಾ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇದ್ದರೆ ಬೈಕ್ ಬಳಸಿಕೊಂಡು ಮೆಟ್ರೋ ನಿಲ್ದಾಣಕ್ಕೆ ಹೋಗುವುದು ಸುಲಭ” ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಆಟೋ ಬುಕ್ ಮಾಡಲು ಹೆಚ್ಚು ಹಣ ಕೊಡಬೇಕಾಗುತ್ತದೆ. ಬಿಎಂಆರ್‌ಸಿಎಲ್ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ, ಪ್ರತಿದಿನ ಕೇವಲ ರೂ. 30 ಖರ್ಚು ಮಾಡಿ ನನ್ನ ಬೈಕ್ ನಿಲ್ಲಿಸಬಹುದು ಎಂದು ಮತ್ತೊಬ್ಬ ಪ್ರಯಾಣಿಕ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಾಹನ ಸಾಮರ್ಥ್ಯ, ನಿಲ್ದಾಣಗಳು
- ರಾಗಿಗುಡ್ಡ- 220
- ಬಿಟಿಎಂ ಲೇಔಟ್ -216
- ಸಿಲ್ಕ್ ಬೋರ್ಡ್ – 230
- ಬೊಮ್ಮನಹಳ್ಳಿ – 85
- ಎಲೆಕ್ಟ್ರಾನಿಕ್ ಸಿಟಿ – 851
- ಕೋನಪ್ಪನ ಅಗ್ರಹಾರ – 77
- ಹೆಬ್ಬಗೋಡಿ -150
- ಬೊಮ್ಮಸಂದ್ರ – 92
- ಹೊಂಗಸಂದ್ರ – 155
- ಕೂಡ್ಲು ಗೇಟ್ – 85
- ಹೊಸ ರಸ್ತೆ – 90