ಉಪೇಂದ್ರ ಕನ್ನಡದ ‘ಬುದ್ಧಿವಂತ’ ನಿರ್ದೇಶಕ, ನಟ. ಆದರೆ ಹ್ಯಾಕರ್‌ಗಳ ಕಣ್ಣು ಈಗ ಉಪೇಂದ್ರ ದಂಪತಿ ಮೇಲೆ ಬಿದ್ದಿದೆ. ಸೋಮವಾರ ಉಪೇಂದ್ರ ಮತ್ತು ಪ್ರಿಯಾಂಕಾ ಈ ಕುರಿತು ವಿಡಿಯೋ ಮಾಡಿ ಹಾಕಿದ್ದು, ನಮ್ಮ ಕಡೆಯಿಂದ ಸಂದೇಶ ಬಂದರೆ ಯಾರೂ ಸಹ ಹಣ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಖ್ಯಾತ ನಟ ಮತ್ತು ನಿರ್ದೇಶಕ ಉಪೇಂದ್ರ ಹಾಗೂ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಮೊಬೈಲ್ ಫೋನ್‌ಗಳು ಹ್ಯಾಕ್ ಆಗಿರುವ ಬಗ್ಗೆ ಸೋಮವಾರ ವರದಿಯಾಗಿದೆ. ಈ ಕುರಿತು ದಂಪತಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ, ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದಾರೆ.
ಸೋಮವಾರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಇಬ್ಬರೂ ತಮ್ಮ ಅಭಿಮಾನಿಗಳು ಮತ್ತು ಆಪ್ತರಿಗೆ ತಮ್ಮ ನಂಬರ್‌ಗಳಿಂದ ಬರುವ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಮನವಿ ಮಾಡಿದ್ದಾರೆ.
ಅನಾಮಿಕ ವ್ಯಕ್ತಿಯೊಬ್ಬರು ಪ್ರಿಯಾಂಕಾ ಉಪೇಂದ್ರ ಮೊಬೈಲ್‌ಗೆ ಕರೆ ಮಾಡಿ, ಒಟಿಪಿ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಕೇಳಿದ್ದಾರೆ. ಅಜಾಗರೂಕತೆಯಿಂದ ನೀಡಿದ ಮಾಹಿತಿಯಿಂದಾಗಿ, ಪ್ರಿಯಾಂಕಾ ಮೊಬೈಲ್ ಫೋನ್ ಹ್ಯಾಕ್ ಆಗಿದೆ.
ನಂತರ, ಪ್ರಿಯಾಂಕಾ ಪತಿ ಉಪೇಂದ್ರ ಫೋನ್ ಬಳಸಿ ಹ್ಯಾಕ್‌ರ್ ನಂಬರ್‌ಗೆ ಕರೆ ಮಾಡಿದ್ದಾರೆ. ಇದರ ಪರಿಣಾಮವಾಗಿ, ಉಪೇಂದ್ರ ಮೊಬೈಲ್ ಕೂಡ ಹ್ಯಾಕ್ ಆಗಿದೆ. ಈ ಕುರಿತು ಉಪೇಂದ್ರ ಮತ್ತು ಪ್ರಿಯಾಂಕಾ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಅದರಲ್ಲಿ, ತಮ್ಮ ನಂಬರ್‌ಗಳಿಂದ ಯಾರಾದರೂ ಹಣ ಕೇಳಿದರೆ ದಯವಿಟ್ಟು ಹಾಕಬೇಡಿ ಎಂದು ಸ್ಪಷ್ಟವಾಗಿ ಮನವಿ ಮಾಡಿದ್ದಾರೆ. ಹ್ಯಾಕರ್‌ಗಳು ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡು ಹಣ ವಸೂಲಿ ಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.