Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರಿಗರೇ ಎಚ್ಚರ: ಎಲ್ಲೆಂದರಲ್ಲಿ ಕಸ ಹಾಕಿದ್ರೆ 2,000 ರೂ. ದಂಡ

ಬೆಂಗಳೂರಿಗರೇ ಎಚ್ಚರ: ಎಲ್ಲೆಂದರಲ್ಲಿ ಕಸ ಹಾಕಿದ್ರೆ 2,000 ರೂ. ದಂಡ

0

ಬೆಂಗಳೂರಿಗರೇ ಎಚ್ಚರವಿರಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಕಠಿಣ ಕ್ರಮ ನಗರದಲ್ಲಿ ಜಾರಿಯಾಗಲಿದೆ. ನಗರದ ಎಲ್ಲೆಂದರಲ್ಲಿ ಕಸ ಎಸೆದರೆ ಇನ್ನು ಮುಂದೆ 2 ಸಾವಿರ ರೂ. ದಂಡ ಹಾಕಲಾಗುವುದು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯ ನಿರ್ವಾಹಕ ಕರೀಗೌಡ ಎಚ್ಚರಿಕೆ ನೀಡಿದ್ದಾರೆ.

ಮನೆ ಮುಂದೆ ಕಸದ ವಾಹನ ಬಂದರೂ ಕಸ ಹಾಕದೆ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬಿಸಿ ಮುಟ್ಟಿಸಬೇಕು ಎಂಬ ಉದ್ದೇಶದಿಂದ ಇಂತಹ ಕಠಿಣ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಕಂಡ-ಕಂಡಲ್ಲಿ ಕಸ ಎಸೆಯುವವರಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುವುದು. ದಂಡಕ್ಕೆ ತುತ್ತಾದವರಿಂದ ಅದೆ ಪ್ರವೃತ್ತಿ ಮರುಕಳಿಸಿದರೆ 2000 ರೂ.ಗಳ ದಂಡ ವಿಧಿಸಲಾಗುವುದು. ಕಸ ಎಸೆಯುವವರ ಮೇಲೆ ನಿಗಾ ಇಡಲು ಈಗಾಗಲೇ ಮಾರ್ಷಲ್‌ಗಳನ್ನು ನೇಮಿಸಲಾಗಿದೆ. ಇವರಿಗೆ ದಂಡ ವಿಧಿಸುವ ಅಧಿಕಾರ ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ಲಾಸ್ಟಿಕ್ ಸಮರ್ಪಕ ಕಸ ನಿರ್ವಹಣೆಗೆ ಅಡ್ಡಿಯಾಗುತ್ತಿರುವ ಹಿನ್ನೆಲೆ ಏಕ ಬಳಕೆ ಪ್ಲಾಸ್ಟಿಕ್‌ಗೆ ಸಂಪೂರ್ಣ ಕಡಿವಾಣ ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್‌ ಬಳಕೆ ತಡೆಗೆ 27 ತಂಡಗಳ ರಚನೆ ಮಾಡಲಾಗುವುದು. ಈ ತಂಡಗಳಿಗೆ ವಾರಕ್ಕೆ 5 ವಾರ್ಡ್‌ಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕಳೆದ 10 ದಿನದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ 281 ಸಗಟು ವ್ಯಾಪಾರಿಗಳು, 2842 ಚಿಲ್ಲರೆ ವ್ಯಾಪಾರಿಗಳಿಂದ 49.14 ಲಕ್ಷದಂಡ ವಸೂಲಿ ಮಾಡಲಾಗಿದೆ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಕಸವನ್ನು ಕಣ್ಣೂರಿನಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇನ್ನೆರಡು ವರ್ಷ ಅಲ್ಲೇ ವಿಲೇವಾರಿ ಮಾಡಲಾಗುವುದು ಅಲ್ಲಿಯವರೆಗೆ ಯಾವುದೇ ಸಮಸ್ಯೆ ಇಲ್ಲ. ಜತೆಗೆ ಬೆಂಗಳೂರು ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕಸ ವಿಲೇವಾರಿಗೆ ಹೊಸ ಜಾಗಗಳನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸ್ವಚ್ಛತಾ ಕಾರ್ಯ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶುಕ್ರವಾರ ಪೂರ್ವ ನಗರ ಪಾಲಿಕೆ ಆಯುಕ್ತ ಡಿ. ಎಸ್. ರಮೇಶ್ ನೇತೃತ್ವದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.

ಪೂರ್ವ ನಗರ ಪಾಲಿಕೆಯ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಸುತ್ತಮುತ್ತಲಿನ ಪ್ರದೇಶ, ಮೇಡಹಳ್ಳಿ, ಪ್ರೈ ಬಡಾವಣೆ, ಐ.ಟಿ.ಐ ಮುಖ್ಯರಸ್ತೆ ರಾಮವ ರ್ತಿನ ಗ ರ. ಎ.ಇ.ಸಿ.ಎಸ್ ಬಡಾವಣೆ, ಹೆಚ್.ಎ.ಎಲ್ ರಸ್ತೆ, ಮಾರಗೊಂಡನಹಳ್ಳಿ, ಐ.ಟಿ.ಐ ಸರ್ವಿಸ್ ರಸ್ತೆ ದೂರವಾಣಿನಗರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

ಡಿ.ನಾರಾಯಣಪುರದ ಉದಯನಗರ ಹಾಗೂ ಟಿನ್ ಫ್ಯಾಕ್ಟರಿ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿರುವವರಿಗೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ಜಾಗೃತಿ ಮೂಡಿಸಲಾಗಿದ್ದು, ಒಂದು ವೇಳೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸದಿದ್ದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಅಡೆ-ತಡೆಗಳಿದ್ದ ಪಾದಚಾರಿ ಮಾರ್ಗವನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version