ಯಕ್ಸಂಬಾ: ಮಳೆಯ ಪ್ರಮಾಣ ಕ್ಷೀಣಿಸಿದರೂ, ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಕೃಷ್ಣಾ, ದೂಧಗಂಗಾ ನದಿ ಸೇರಿದಂತೆ ಉಪ ನದಿಗಳ ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿದೆ. ಗುರುವಾರ ನದಿಗಳ ನೀರಿನ ಮಟ್ಟ ಮತ್ತೆ 3 ಅಡಿ ಏರಿಕೆಯಾಗಿದ್ದರಿಂದ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ದೂಧಗಂಗಾ ನದಿಯ ಸದಲಗಾ-ಬೋರಗಾಂವ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಘಗಿತಗೊಂಡಿದೆ.
ಕೊಯ್ನಾ ಜಲಾಶಯದಿಂದ 95,300 ಕ್ಯೂಸೆಕ್, ವಾರಣಾ- 24,090, ರಾಧಾನಗರ- 4,356, ಮತ್ತು ಕಾಳಮ್ಮಾವಾಡಿ ಜಲಾಶಯದಿಂದ 18,600 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ನದಿಗಳ ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿರುವುದರಿಂದ ನದಿತೀರದ ಜನತೆಗೆ ಆತಂಕದಲ್ಲಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿ ಅನಾಹುತಗಳನ್ನು ತಪ್ಪಿಸಲು 30 ಜನರ ಎನ್‌ಡಿಆರ್‌ಎಫ್ ತಂಡ ಸಜ್ಜಾಗಿದೆ.
ವೇದಗಂಗಾ ನದಿತೀರದ ಹುನ್ನರಗಿ ಗ್ರಾಮದ ಕಾಳಜಿ ಕೇಂದ್ರದಲ್ಲಿ 130 ಜನರು ಆಶ್ರಯ ಪಡೆದಿದ್ದಾರೆ. ಹುನ್ನರಗಿ ಗ್ರಾಮದ ಲಕ್ಷ್ಮೀ ನಾರಾಯಣ ಮಂದಿರ ಜಲಾವೃತಗೊಂಡಿದೆ. ನದಿ ತೀರದ ರೈತರಿಂದ ಜಾನುವಾರುಗಳ ಸ್ಥಳಾಂತರ ಮುಂದುವರಿದಿದೆ. ಯಕ್ಸಂಬಾ ಪಟ್ಟಣದ ಹೊರವಲಯದ ಶ್ರೀ ಕರ್ಲಹೊಂಡಲಿಂಗೇಶ್ವರ ದೇವಸ್ಥಾನಕ್ಕೆ ಪ್ರವಾಹದ ನೀರು ಸುತ್ತುವರಿದಿದ್ದು, ಪ್ರವಾಹದಿಂದ ಕೊಚ್ಚಿಬಂದ ಸತ್ತ ಆಕಳನ್ನು ಕಮಿಟಿಯ ಸದಸ್ಯರು ಅಂತ್ಯಸಂಸ್ಕಾರ ಮಾಡಿದರು.
ಗಡಿ ಭಾಗದ ಚಿಕ್ಕೋಡಿ-ನಿಪ್ಪಾಣಿ ತಾಲೂಕಿನ ಕೆಳಹಂತದ ಒಟ್ಟು 8 ಬ್ಯಾರೇಜಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿವೆ. ಗುರುವಾರ ದೂದಗಂಗಾ ನದಿಯ ಪ್ರವಾಹದಿಂದ ಹೊಲಗದ್ದೆಗಳಿಗೆ ತೆರಳುವ ರಸ್ತೆಗಳ ಮೇಲೆ ನೀರು ಬಂದಿದ್ದು, ರೈತರು ಹೊಲಗದ್ದೆಗಳಿಗೆ ತೆರಳಲು ಪರದಾಡುವಂತಾಗಿದೆ.
ಸುಳಕುಡ ಬ್ಯಾರೇಜ್ ಮುಖಾಂತರ 39,072 ಕ್ಯೂಸೆಕ್ ಮತ್ತು ರಾಜಾಪುರ ಬ್ಯಾರೇಜ್ ಮುಖಾಂತರ 1,77,500 ಕ್ಯೂಸೆಕ್ ಸೇರಿ ಒಟ್ಟು 2,16,572 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ. ಇದು ಬುಧವಾರದ ಪ್ರಮಾಣಕ್ಕಿಂತ 35,568 ಕ್ಯೂಸೆಕ್ ಹೆಚ್ಚಾಗಿದೆ.
ಕುಡಚಿ-ಉಗಾರಖುರ್ದ್‌ನಲ್ಲಿ ರೈಲು ನಿಲುಗಡೆ
ಕೃಷ್ಣಾ ಹಾಗೂ ಘಟಪ್ರಭಾ ನದಿಯ ವ್ಯಾಪ್ತಿಯಲ್ಲಿ ಬರುವ 43ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡು ರಸ್ತೆ ಸಾರಿಗೆ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಇಲಾಖೆಯಿಂದ ವಂದೇ ಭಾರತ್ ರೈಲು ಹೊರತುಪಡಿಸಿ ಈ ಭಾಗದಲ್ಲಿ ಸಂಚರಿಸುವ ಪ್ಯಾಸೆಂಜರ್ ರೈಲುಗಳು ಸೇರಿದಂತೆ ಎಲ್ಲ ಎಕ್ಸ್‌ಪ್ರೆಸ್ ರೈಲುಗಳನ್ನು ಕುಡಚಿ ಮತ್ತು ಉಗಾರಖುರ್ದ್ ರೈಲು ನಿಲ್ದಾಣದಲ್ಲಿ ಎರಡು ನಿಮಿಷದ ತಾತ್ಕಾಲಿಕ ನಿಲುಗಡೆಗೆ ರೈಲು ಇಲಾಖೆ ಆದೇಶಿಸಿದೆ.
ಸಂಸದ ಈರಣ್ಣ ಕಡಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ಕುಡಚಿ-ಉಗಾರಖುರ್ದ್ ನಡುವಿನ ಬೃಹತ್ ಕುಡಚಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು. ಈ ಮಾರ್ಗವು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ದಾರಿಯಾಗಿದೆ.