Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿ: ಹುಬ್ಬೆ ಮಳೆಯ ಅಬ್ಬರ – ಜಮೀನು, ಸೇತುವೆಗಳು ಜಲಾವೃತ

ಬಳ್ಳಾರಿ: ಹುಬ್ಬೆ ಮಳೆಯ ಅಬ್ಬರ – ಜಮೀನು, ಸೇತುವೆಗಳು ಜಲಾವೃತ

0

ಕಂಪ್ಲಿ: ಕಳೆದ 15 ದಿನಗಳಿಂದ ಕಣ್ಮರೆಯಾಗಿದ್ದ ಮಳೆ ಪ್ರತ್ಯಕ್ಷವಾಗಿದೆ. ದಾಖಲೆಯ 60.8 ಮಿ.ಮೀಟರನಷ್ಟು ಮಳೆಯಾಗಿದ್ದು, ತಾಲೂಕಿನಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದರೆ, ಭತ್ತವೂ ಸೇರಿದಂತೆ ವಿವಿಧ ಬೆಳೆಗಳ ಜಮೀನುಗಳು, ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ.

ಗುಡುಗು, ಸಿಡಿಲು, ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಬಿಸಿಲಿನಿಂದ ಬೇಯುತ್ತಿದ್ದ ಭೂಮಿಗೆ ತಂಪನ್ನೆರಚಿದೆ. ದೇವಲಾಪುರ ರಾಧಕೃಷ್ಣ ಕ್ಯಾಂಪ್ ಹತ್ತಿರದಲ್ಲಿ ಹಳ್ಳ-ಕೊಳ್ಳಲುಗಳು ಭರ್ತಿಯಾಗಿ ಭಾರಿ ಪ್ರಮಾಣದ ಮಳೆ ನೀರು ಭತ್ತವೂ ಸೇರಿದಂತೆ ವಿವಿಧ ಬೆಳೆಗಳ ಜಮೀನುಗಳಿಗೆ ನುಗ್ಗಿದ್ದು, ಜಮೀನುಗಳು ಕೆರೆಯಂತಾಗಿದ್ದು, ತೆನೆ ಬಿಡುವ ಹಂತದಲ್ಲಿದ್ದ ಭತ್ತದ ಬೆಳೆಗಳಿಗೆ ತೀವ್ರವಾದ ಹಾನಿಯಾಗುವ ಸಂಭವವಿದೆ.

ತಾಲ್ಲೂಕಿನ ಬಳ್ಳಾಪುರ-ಜಾಯಿಗನೂರು, ಕಂಪ್ಲಿ-ಚಿಕ್ಕಜಾಯಿಗನೂರು ಸಂಪರ್ಕ ರಸ್ತೆಗಳು ಭಾರಿ ಮಳೆಯಿಂದಾಗ ಜಲಾವೃತಗೊಂಡಿದ್ದು, ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಡಿತಗೊಂಡಿದೆ. ದರೋಜಿ ಕೆರೆಯೂ ಭರ್ತಿಯಾಗಿದ್ದು, ಕಳೆದ ರಾತ್ರಿಯ ಮಳೆಯ ನೀರಿನಿಂದಾಗಿ ಕೆರೆ ಕೋಡಿಯಿಂದ ಭಾರಿ ಪ್ರಮಾಣದ ನೀರು ನಾರಿಹಳ್ಳಕ್ಕೆ ಬರುತ್ತಿದ್ದು, ನಾರಿ ಹಳ್ಳದ ಅಕ್ಕಪಕ್ಕದ ಗ್ರಾಮಗಳಾದ ಜೀರಿಗನೂರು, ಸುಗ್ಗೇನಹಳ್ಳಿ, ಹಂಪಾದೇವನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಹಳ್ಳದ ಅಕ್ಕಪಕ್ಕದ ಜಮೀನುಗಳು ಜಲಾವೃತಗೊಂಡಿವೆ.

ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ಕಚ್ಚಾ ಮನೆಯೊಂದು ಭಾಗಶಃ ಕುಸಿದಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಎಮ್ಮಿಗನೂರು ಭಾಗದಲ್ಲಿ ಹರಿಯುತ್ತಿರುವ ನಾರಿಹಳ್ಳ ಮೈದುಂಬಿ ಹರಿಯುತ್ತಿದ್ದು, ಈ ಭಾಗದ ಹಳ್ಳದ ಅಕ್ಕಪಕ್ಕದ ಜಮೀನುಗಳು ಸಹಿತ ಜಲಾವೃತಗೊಂಡಿವೆ. ಅಲ್ಲಲ್ಲಿ ಬೃಹತ್ ಗಿಡಮರಗಳು ಧರೆಗುರುಳಿದ್ದರೆ, ವಿದ್ಯುತ್ ಕಂಬಗಳು ನೆಲಕ್ಕೆ ಭಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಭಾರಿ ಮಳೆ, ಗಾಳಿಯಿಂದಾಗಿ ಬೃಹತ್ ಮರ ಧರೆಗುರುಳಿದ್ದರೆ, ವಿದ್ಯುತ್ ಕಂಬ ನೆಲಕ್ಕೆ ಬಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಕಂಪ್ಲಿ ತಹಶೀಲ್ದಾರ್‌ ಜೂಗಲ್ ಮಂಜುನಾಯಕ, “ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆ, ಗಾಳಿಯಿಂದಾಗಿ ಸಂಪರ್ಕ ರಸ್ತೆಗಳು, ಜಮೀನುಗಳು ಜಲಾವೃತ್ತಗೊಂಡಿದೆ. ಒಂದು ಮನೆ ಭಾಗಶಃ ಕುಸಿದಿದೆ. ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ” ಎಂದು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version