Home ನಮ್ಮ ಜಿಲ್ಲೆ ₹ 16 ಕೋಟಿ ಜಿಎಸ್‌ಟಿ ವಂಚನೆ: ಓರ್ವನ ಬಂಧನ

₹ 16 ಕೋಟಿ ಜಿಎಸ್‌ಟಿ ವಂಚನೆ: ಓರ್ವನ ಬಂಧನ

0

ಬಳ್ಳಾರಿ: ಬೆಳಗಾವಿ ಘಟಕದ ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿ.ಜಿ.ಜಿ.ಐ) ಅಧಿಕಾರಿಗಳ ದಾಳಿಯಿಂದ ಬಳ್ಳಾರಿಯಲ್ಲಿ ಭಾರೀ ಮಟ್ಟದ ತೆರಿಗೆ ವಂಚನೆ ಬಯಲಾಗಿದೆ. ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಿದ ಶೋಧ ಮತ್ತು ತಪಾಸಣೆ ಕಾರ್ಯಾಚರಣೆಯಲ್ಲಿ 16 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಹಿವಾಟು ಪತ್ತೆಯಾಗಿದೆ.

ತನಿಖೆಯ ಪ್ರಾಥಮಿಕ ಹಂತದಲ್ಲಿಯೇ, ಯಾವುದೇ ನೈಜ ವ್ಯವಹಾರ ಚಟುವಟಿಕೆಗಳಿಲ್ಲದೇ ನಕಲಿ ಸಂಸ್ಥೆಗಳ ಜಾಲವನ್ನು ರಚಿಸಿ, ನಕಲಿ ಇನ್‌ವಾಯ್ಸ್ ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿರುವುದಾಗಿ ಬಹಿರಂಗವಾಗಿದೆ. ದತ್ತಾಂಶ ವಿಶ್ಲೇಷಣೆ ಆರೋಪಿಯು ನಡೆಸಿದ ಚಟುವಟಿಕೆಗಳು ಸಂಪೂರ್ಣ ವಂಚನೆಯ ಸ್ವರೂಪದ್ದೇ ಎಂದು ದೃಢಪಡಿಸಿದೆ.

ಶೋಧದ ವೇಳೆ ನಕಲಿ ಬಾಡಿಗೆ ಒಪ್ಪಂದಗಳು, ಲೆಟರ್‌ಹೆಡ್‌ಗಳು, ನಕಲಿ ಇನ್‌ವಾಯ್ಸ್‌ಗಳು ಹಾಗೂ ವಂಚನೆಗೆ ಬಳಸಿದ ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ತನ್ನ ಉದ್ಯೋಗಿಗಳ ವೈಯಕ್ತಿಕ ದಾಖಲೆಗಳನ್ನೇ ದುರುಪಯೋಗ ಪಡಿಸಿ ಶೆಲ್ ಕಂಪನಿಗಳನ್ನು ನಡೆಸುತ್ತಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಾನೂನುಬದ್ಧ ವ್ಯವಹಾರ ಕಾರ್ಯಾಚರಣೆಗಳಿಲ್ಲದೆ ಆರೋಪಿಗಳು ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ, ಅವುಗಳ ನಕಲಿ ಇನ್‌ವಾಯ್ಸ್‌ಗಳು ಮತ್ತು ಇ-ವೇ ಬಿಲ್‌ಗಳನ್ನು ಸೃಷಿಸಿದ್ದಾರೆ. ಐಟಿಸಿಯ ಲಾಭ ಪಡೆಯಲು, ವರ್ಗಾಯಿಸಲು ನಕಲಿ ಕಂಪನಿಗಳನ್ನು ಪ್ರಾರಂಭಿಸಿದ್ದಾನೆ. ಶೋಧದ ವೇಳೆ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತನನ್ನು ‘ಮಾಸ್ಟರ್ ಮೈಂಡ್’ ಎಂದು ಗುರುತಿಸಿರುವ ಅಧಿಕಾರಿಗಳು, ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಜಿಎಸ್‌ಟಿ ವಂಚನೆ: 2024-25ನೇ ಆರ್ಥಿಕ ವರ್ಷದಲ್ಲಿ 39,577 ಕೋಟಿ ರೂ. ತೆರಿಗೆ ವಂಚನೆಯನ್ನು ಕರ್ನಾಟಕದ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 5 ಪಟ್ಟು ಅಧಿಕವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸಣ್ಣ ವರ್ತಕರು, ಬೀದಿಬದಿ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ನೀಡಲಾಗಿದ್ದು, ವ್ಯಾಪಾರಿಗಳು UPI ನಲ್ಲಿ ಹಣ ಸ್ವೀಕರಿಸುವುದನ್ನು ಬಿಟ್ಟು ದುಡ್ಡು ಕೊಡಿ ಎನ್ನುತ್ತಿದ್ದಾರೆ ಎಂದು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಅವರು ಲಿಖಿತ ಉತ್ತರ ನೀಡಿದ್ದಾರೆ.

2024-25ರಲ್ಲಿ ಆರ್ಥಿಕ ವರ್ಷದಲ್ಲಿ ರೂ. 39,577 ಕೋಟಿ ರೂಪಾಯಿಗಳನ್ನು ಒಳಗೊಂಡ 1,254 ಪ್ರಕರಣ ಸಿಜಿಎಸ್‌ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಪ್ರಕರಣದಲ್ಲಿ 9 ಜನರನ್ನು ಬಂಧಿಸಲಾಗಿತ್ತು. 1,623 ಕೋಟಿ ರೂ. ಸ್ವಯಂಪ್ರೇರಿತ ಪಾವತಿ ಮಾಡಲಾಗಿದೆ. ಆದರೆ ಈ ಬಾರಿ ಸಿಜಿಎಸ್‌ಟಿ ಅಧಿಕಾರಿಗಳು ಪತ್ತೆ ಮಾಡಿದ ಹಣ 5 ಪಟ್ಟು ಅಧಿಕವಾಗಿದೆ ಎಂದು ಹೇಳಿದ್ದಾರೆ.

ವ್ಯಾಪಾರಿಗಳು UPI ನಲ್ಲಿ ಹಣ ಸ್ವೀಕರಿಸುವುದನ್ನು ಬಿಟ್ಟು ದುಡ್ಡು ಕೊಡಿ ಎನ್ನುತ್ತಿದ್ದಾರೆ ಎಂಬ ಪ್ರಶ್ನೆಗೆ ಸೀತಾರಮನ್‌ ಅವರು, ʼUPI ವ್ಯವಹಾರವನ್ನ ಆಧರಿಸಿ ಯಾವುದೇ ಜಿಎಸ್‌ಟಿ ನೋಟಿಸ್‌ ಜಾರಿ ಮಾಡಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version