ಬಾಗಲಕೋಟೆ(ಕುಳಗೇರಿ ಕ್ರಾಸ್): ಇಂಧನದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಯುಗದಲ್ಲಿ ಪರ್ಯಾಯ ಪರಿಸರ ಸ್ನೇಹಿ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳನ್ನು ಹುಡುಕುವ ಅಗತ್ಯತೆ ಹೆಚ್ಚಾಗಿದೆ. ಇಂಧನದ ಆಮದು ವೆಚ್ಚ ಹೆಚ್ಚುತ್ತಿರುವ ಕಾರಣ ಭಾರತ ಸರ್ಕಾರ ಎಥೆನಾಲ್ ಮಿಶ್ರಿತ ಪೆಟ್ರೋಲ್(E10. E20) ಬಳಕೆಯನ್ನು ಉತ್ತೇಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಹಿಜೋಳದ(ಸ್ವೀಟ್ ಸೋರ್ಗಮ್)ದ ಬೆಳೆಯು ಅತ್ಯಂತ ಭರವಸೆಯ ಬೆಳೆ ಎನಿಸಿಕೊಂಡಿದ್ದು ಹೆಚ್ಚು ರೈತರು ಈ ಬೆಳೆಯನ್ನು ಬೆಳೆಯುವ ಮೂಲಕ ಇಂಧನದ ಕೊರತೆ ನೀಗಿಸಬೇಕಿದೆ ಎಂದು ಮಾಜಿ ಸಚಿವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಮುರುಗೇಶ ನಿರಾಣಿ ರೈತರಿಗೆ ಸಲಹೆ ನೀಡಿದರು.
ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿ ಹಾಗೂ ನ್ಯಾಷನಲ್ ಶುಗರ್ ಇನ್ಸ್ಟಿಟ್ಯೂಟ್ ಹಿರಿಯ ಅಧಿಕಾರಿ ಮತ್ತು ವಿಜ್ಞಾನಿಗಳು, ಅಡ್ವಂತ ಸೀಡ್ಸ್ ಪ್ರೈ ಲಿಮಿಟೆಡ್‌ನ ಅಧಿಕಾರಿಗಳ ಜೊತೆಗೂಡಿ ಬಾದಾಮಿ ಹಾಗೂ ನರಗುಂದ ತಾಲೂಕಿನ ಕಲ್ಲಾಪೂರ, ಕಿತ್ತಲಿ, ಹೆಬ್ಬಳ್ಳಿ, ಬೆಳವಲಕೊಪ್ಪ ಹೀಗೆ ಸಿಹಿಜೋಳ ಬೆಳೆದ ರೈತರ ಜಮೀನುಗಳಿಗೆ ಭೇಟಿ ನೀಡಿ ಬಯೋಎಥೆನಾಲ್ ಉತ್ಪಾದನೆಯಲ್ಲಿ ಸಿಹಿ ಜೋಳದ ಬಳಕೆ ಹಾಗೂ ಸಾಧಕ-ಬಾಧಕಗಳ ಕುರಿತು ಸುಧೀರ್ಘವಾಗಿ ಚರ್ಚಿಸಿದರು.
ಸ್ವೀಟ್ ಸೋರ್ಗಮ್ ಒಂದು ಧಾನ್ಯವರ್ಗದ ಬೆಳೆ. ಇದು ಸಾಮಾನ್ಯ ಜೋಳಕ್ಕಿಂತ ಎತ್ತರವಾಗಿದ್ದು ಇದರ ದಂಡದಲ್ಲಿ ಕಬ್ಬಿನಂತೆ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುತ್ತದೆ. ಈ ಸಕ್ಕರೆ ಎಥೆನಾಲ್ ಉತ್ಪಾದನೆಗೆ ಸೂಕ್ತವಾಗಿದೆ. ಮುಖ್ಯವಾಗಿ ಬರಪ್ರದೇಶಗಳಲ್ಲಿ ಬೆಳೆದು ಕಡಿಮೆ ನೀರಿನ ಅವಶ್ಯಕತೆಯಿಂದ ರೈತರಿಗೆ ಉತ್ತಮ ಆದಾಯವನ್ನು ನೀಡಬಲ್ಲದು.
ಸ್ವೀಟ್ ಸೋರ್ಗಮ್‌ನಿಂದ ದೊರಕುವ ಎಥೆನಾಲ್ ಪೆಟ್ರೋಲ್‌ಗೆ ಮಿಶ್ರಣವಾಗಿ ಬಳಸಲಾಗುತ್ತದೆ. ಇದರಿಂದ ವಾತಾವರಣದ ಮಾಲಿನ್ಯ ಕಡಿಮೆಯಾಗುತ್ತದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಬರುವ ಬ್ಯಾಗಾಸ್‌ನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದು ಮತ್ತು ಉಳಿದ ಸ್ಲರಿಯನ್ನು ಜೈವಿಕ ಗೊಬ್ಬರಕ್ಕೆ ಬಳಸಬಹುದು. ಇದರಿಂದ “ಜೀರೋ ವೆಸ್ಟ್” ಮಾದರಿಯ ಕೈಗಾರಿಗೆ ಸಾಧ್ಯವಾಗುತ್ತದೆ.
ರೈತರಿಗೆ ಇದು ಅತ್ಯಂತ ಲಾಭದಾಯಕ ಬೆಳೆ ಏಕೆಂದರೆ ಕಡಿಮೆ ಅವಧಿಯಲ್ಲಿ ಬೆಳೆಯುವ ಈ ಬೆಳೆಗೆ ನೀರಿನ ಅವಶ್ಯಕತೆ ಕಡಿಮೆ. ಸರ್ಕಾರದ ಎಥೆನಾಲ್ ಮಿಶ್ರಣ ನೀತಿಯ ಹಿನ್ನೆಲೆಯಲ್ಲಿ ಸ್ವೀಟ್ ಸೋರ್ಗಮ್ ಬೆಳೆಯ ಬೇಡಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.
ಈ ಬೆಳೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ಮೂಲಕ ಸ್ವಚ್ಛ ಹಾಗೂ ಸ್ವಸ್ಥ ಭಾರತ, ಹಸಿರು ಇಂಧನ, ರೈತರ ಆದಾಯ ದ್ವಿಗುಣಗೊಳಿಸುವಿಕೆ, ಸ್ಥಳೀಯ ಆರ್ಥಿಕತೆಗೆ ಹೆಚ್ಚಿನ ಒತ್ತು. ಹೀಗೆ ಹಲಾವಾರು ಮಹತ್ವಾಕಾಂಕ್ಷೆಯನ್ನು ಮುರುಗೇಶ್ ನಿರಾಣಿ ಅವರು ಹೊಂದಿದ್ದು ಇದರ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಎನ್.ವಿ. ಪಡಿಯಾರ್ ತಿಳಿಸಿದರು.
ಭಾರತ್ ಪೆಟ್ರೋಲಿಯಂ ಮ್ಯಾನೇಜರ್ ಹಾಗೂ ಆರ್.ಡಿ ಪರಮೇಶ್ವರ ಪಾಟೀಲ, ನ್ಯಾಷನಲ್ ಶುಗರ್ಸ್ ಖಾನ್ಪುರದ ರಾಷ್ಟ್ರೀಯ ನಿರ್ದೇಶಕರಾದ ಡಾ. ಸೀಮಾ ಪರೋಹ, ವಿಜ್ಞಾನಿಗಳಾದ ಡಾ. ಅನಂತ ಲಕ್ಷ್ಮಿ, ಡಾ.ಲೋಕೇಶ ಬಾಬರ್, ಅಡ್ವಂತ ಸೀಡ್ಸ್ ಆರ್.ಡಿ ಗಳಾದ ಡಾ. ವಿಲಾಶ್ ಟೋನಾಪಿ, ಡಾ. ಸತ್ಯದೇವ.ವಿ, ಟೆಕ್ನಾಲಜಿ ಡೆವಲಪರ್ ಸಂತೋಷ ಯಾದವ್ ಇದ್ದರು.