ಬಳ್ಳಾರಿ: ಬಳ್ಳಾರಿಯನ್ನು ದೇಶದ ಮಾರುಕಟ್ಟೆಯ ಎರಡನೇಯ ಹಬ್ ಮಾಡುವ ಗುರಿ ಇದ್ದು, ಇದಕ್ಕೆ ಪೂರಕ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಸದ ಇ. ತುಕಾರಾಮ್ ಹೇಳಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನವೀಕೃತ ಕಟ್ಟಡ, ಲಿಫ್ಟ್ ಗುರುವಾರ ಉದ್ಘಾಟಿಸಿ ಮಾತನಾಡಿದರು. ಬಳ್ಳಾರಿ ಜಿಲ್ಲೆಯು ಭೌಗೋಳಿಕವಾಗಿ ಭಿನ್ನವಾಗಿದೆ. ಸಂಡೂರು ತಾಲೂಕಿನಲ್ಲಿ ಮ್ಯಾಂಗನೀಸ್, ಕಬ್ಬಿಣದ ಅದಿರು, ಕಂಪ್ಲಿ, ಕುರುಗೋಡು ಮತ್ತು ಸಿರುಗುಪ್ಪ ತಾಲೂಕಿನಲ್ಲಿ ತುಂಗಭದ್ರಾ ನೀರು ಮೂಲಕ ಉತೃಷ್ಟ ಸೋನಾ ಬೆಳೆಯಲಾಗುತ್ತಿದೆ. ಬಳ್ಳಾರಿಯನ್ನು ಸಹಜವಾಗಿಯೇ ಬಾಂಬೆಯ ನಂತರ, ದೇಶದ ಎರಡನೇ ಮಾರ್ಕೆಟಿಂಗ್ ಹಬ್ ಮಾಡುವ ಪ್ರಯತ್ನ ನಡೆದಿದೆ ಎಂದರು.
ಹೊಸಪೇಟೆ – ಬಳ್ಳಾರಿಗೆ ಹೆಚ್ಚುವರಿ ಗೂಡ್ಸ್ ಮಾರ್ಗಕ್ಕೆ ಅನುಮೋದನೆ ಸಿಕ್ಕಿದ್ದು, ಈ ಮಾರ್ಗ ನಿರ್ಮಾಣದ ಸಂದರ್ಭದಲ್ಲಿ ಅನೇಕ ರೈಲ್ವೆ ಮೇಲ್ಸೇತುವೆಗಳು ಪೂರ್ಣಗೊಳ್ಳಲಿವೆ. ಸುಧಾ ಸರ್ಕಲ್ ನಿರ್ಮಾಣ, ರೇಡಿಯೋ ಪಾರ್ಕ್, ಟ್ರಾಮಾಕೇರ್, ಸೂಪರ್ ಸ್ಪೆಷಾಲಿಟಿ, ಅತ್ಯಾಧುನಿಕ ಆಂಬುಲೆನ್ಸ್, ಬಿಮ್ಸ್ ಆಸ್ಪತ್ರೆ, ಎಂಆರ್‌ಐ ಯಂತ್ರ ಅಳವಡಿಕೆಯ ಅಭಿವೃದ್ಧಿ ಕೆಲಸ ನಡೆಯುತ್ತಿವೆ. ವೇಣಿವೀರಾಪುರ – ಹಗರಿ, ಹಗರಿಯಿಂದ ಸಿರುಗುಪ್ಪ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ಮಾತನಾಡಿ, ಸಂಸದರ ನಿಧಿಯ ಶೇ. 75 ರಷ್ಟನ್ನು ವಿನಿಯೋಗಿಸುತ್ತಿರುವೆ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್, ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ್ ಮಾತನಾಡಿದರು.
ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ: ಅಂದಾಜು 300 ಕೋಟಿ ರೂ.ಗಳ ವೆಚ್ಚದಲ್ಲಿ ಬಳ್ಳಾರಿಯ ವಿಮಾನ ನಿಲ್ದಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗೆ ರಾಯದುರ್ಗಂ ಶಾಸಕರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದ ವೇಳೆ ವಿಮಾನ ನಿಲ್ದಾಣ ನಿರ್ಮಾಣವಾದರೆ ಈ ಭಾಗಕ್ಕೆ ಎಲ್ಲ ರೀತಿ ಅನುಕೂಲ ಆಗಲಿದೆ ಎಂದಿದ್ದರು. ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಈಗಾಗಲೇ ಕೈಗೊಂಡ ಕ್ರಮಗಳ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ವಿವರಿಸಿದ ಅವರು, ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ನಾನು, ಮಾಜಿ ಸಚಿವ ಬಿ. ನಾಗೇಂದ್ರ, ಸಂಸದರಾದ ಡಾ. ಸಯ್ಯದ್ ನಾಸಿರ್ ಹುಸೇನ್ ಹಾಗೂ ತುಕಾರಾಂ ಅವರು ಬದ್ಧತೆಯನ್ನು ಹೊಂದಿದ್ದೇವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ 300 ಕೋಟಿ ರೂ.ಗಳ ವೆಚ್ಚದಲ್ಲಿ ವಿಮಾನ ನಿಲ್ದಾಣದ ಮೂಲಭೂತ ಸೌಕರ್ಯ ಕಾಮಗಾರಿ ಶೀಘ್ರ ಆರಂಭವಾಗಲಿದೆ.
ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಕೇಂದ್ರದ ನಾಗರಿಕ ವಿಮಾನಯಾನ ರಾಜ್ಯ ಸಚಿವ ರಾಂ ಮೋಹನ್ ನಾಯ್ಡು ಹಾಗೂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದರು. ತಮ್ಮೆಲ್ಲರ ಬಹುದಿನಗಳ ಬೇಡಿಕೆಯಾಗಿರುವ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಪ್ರಾಥಮಿಕ ಹಂತದಲ್ಲಿ 11 ಕೋಟಿ ರೂ.ಗಳ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದ್ದು, ಮಾರುಕಟ್ಟೆಯ ನಿರ್ಮಾಣದಿಂದ ಬೆಳೆಗಾರರಿಗೆ, ವ್ಯಾಪಾರಸ್ಥರಿಗೆ ಅನುಕೂಲ ಆಗಲಿದೆ ಎಂದರು.