ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮಹತ್ವದ ಯೋಜನೆ ಮೆಗಾಡೇರಿ. ಆದರೆ ಇದು ಎಲ್ಲಿ ನಿರ್ಮಾಣವಾಗಲಿದೆ? ಎಂಬುದು ಭಾರೀ ಚರ್ಚೆಯ ವಿಚಾರ. ಸರ್ಕಾರ ಮೊದಲು ಬಳ್ಳಾರಿಯಲ್ಲಿ ನಿರ್ಮಾಣ ಎಂದರೆ ಬಳಿಕ ಡೇರಿ ವಿಜಯನಗರ ಜಿಲ್ಲೆ ಪಾಲಾಗಿದೆ ಎಂಬ ಸುದ್ದಿ ಹಬ್ಬಿತ್ತು.
ಈಗ ರಾಬಕೊವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಈ ಕುರಿತು ಅಪ್‌ಡೇಟ್ ನೀಡಿದ್ದಾರೆ. ಶುಕ್ರವಾರ ಅವರು ಬಳ್ಳಾರಿ ನಗರದ ಕೆಎಂಎಫ್‌ನ ಡೈರಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಕೆಎಂಎಫ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾದ ಭೀಮಾನಾಯ್ಕ್ ಮೆಗಾಡೇರಿಯನ್ನು ವಿಜಯನಗರ ಜಿಲ್ಲೆಗೆ ತೆಗೆದುಕೊಂಡು ಹೋಗಿ, ಹೊಸಪೇಟೆಯಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದರು. ಆದ್ದರಿಂದ ಮೆಗಾಡೇರಿ ವಿಚಾರ ಬಳ್ಳಾರಿ, ವಿಜಯನಗರ ಜಿಲ್ಲೆ ನಡುವೆ ಜಟಾಪಟಿಗೆ ಕಾರಣವಾಗಿತ್ತು.
ರಾಘವೇಂದ್ರ ಹಿಟ್ನಾಳ್ ಹೇಳಿದ್ದೇನು?; “ಬಳ್ಳಾರಿ ಜಿಲ್ಲೆಯಲ್ಲಿಯೇ ಮೆಗಾಡೇರಿ ನಿರ್ಮಿಸಲಾಗುವುದು. ಯೋಜನೆ ನಿರ್ಮಾಣಕ್ಕೆ ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದ ಬಳಿಯ 15 ಎಕರೆ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದ್ದು, ಜಿಲ್ಲಾಡಳಿತಕ್ಕೆ ನೀಡಬೇಕಿರುವ 2.92 ಕೋಟಿ ರೂ. ಹಣ ನೀಡುವ ಬಗ್ಗೆ ನಿರ್ದೇಶಕ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದಿಸಲಾಗಿದೆ” ಎಂದು ರಾಘವೇಂದ್ರ ಹಿಟ್ನಾಳ್ ಹೇಳಿದರು.
“ಮೆಗಾಡೇರಿ ನಿರ್ಮಾಣದ ಕಾಮಗಾರಿಯ ಭೂಮಿಪೂಜೆ ಕಾರ್ಯ ನೆರವೇರಿಸಲು ಕ್ರಿಯಾಯೋಜನೆ ರೂಪಿಸಲಾಗುತ್ತದೆ. ಹಂತ-ಹಂತವಾಗಿ ಯೋಜನೆ ಕಾರ್ಯರೂಪಕ್ಕೆ ತಂದು ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಶಂಕುಸ್ಥಾಪನೆ ಮಾಡಲು ಆಹ್ವಾನಿಸಲಾಗುವುದು” ಎಂದು ತಿಳಿಸಿದರು.
“ದೇಶದಲ್ಲಿಯೇ ಮಾದರಿ ಮೆಗಾಡೇರಿಯನ್ನಾಗಿ ಬಳ್ಳಾರಿಯಲ್ಲಿ ಇದನ್ನು ಸ್ಥಾಪಿಸಲಾಗುವುದು. ರಾಬಕೊವಿ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆಗೆ ಹೆಚ್ಚಿನ ಸಹಕಾರ ನೀಡಲಾಗುವುದು. ಈಗಾಗಲೇ ಕೆಎಂಎಫ್ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಪಶು ವೈದ್ಯಾಧಿಕಾರಿಗಳನ್ನು ನೇಮಿಸಿ ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ” ಎಂದರು.
“ಪ್ರಸ್ತುತ ರಾಬಕೊವಿ ಜಿಲ್ಲಾ ಹಾಲು ಒಕ್ಕೂಟವು 2.43 ಲಕ್ಷ ಲೀ. ಹಾಲು ಉತ್ಪಾದನೆ ಇದೆ. ಅದರಲ್ಲಿ ಬಳ್ಳಾರಿ ಜಿಲ್ಲೆಯು 10 ಸಾವಿರ ಲೀ., ವಿಜಯನಗರ ಜಿಲ್ಲೆಯು 1.12 ಲಕ್ಷ ಲೀ., ಕೊಪ್ಪಳ ಜಿಲ್ಲೆಯು 70 ಸಾವಿರ ಲೀ ಮತ್ತು ರಾಯಚೂರು ಜಿಲ್ಲೆಯು 26 ಸಾವಿರ ಲೀ. ಉತ್ಪಾದನೆ ಇದೆ. 4 ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸಲು ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಅಧ್ಯಕ್ಷರು ವಿವರಿಸಿದರು.
“ರಾಬಕೋವಿ ಜಿಲ್ಲಾ ಹಾಲು ಒಕ್ಕೂಟಗಳ ಡೇರಿಗಳ ನಿರ್ವಹಣೆಗೆ ಅನುದಾನ ಮೀಸಲಿರಿಸಲಾಗಿದೆ. ಬಳ್ಳಾರಿ ಡೇರಿಗೆ 1 ಕೋಟಿ ರೂ., ಕೊಪ್ಪಳದ ಬೂದುಗುಂಪಾ ಡೇರಿಗೆ ಸುಮಾರು 4 ರಿಂದ 5 ಕೋಟಿ ರೂ. ಹಾಗೂ ರಾಯಚೂರಿಗೆ ಡೇರಿಗೆ ಕೆಕೆಆರ್‌ಡಿಬಿಯ ಮ್ಯಾಕ್ರೋ ಯೋಜನೆಯಡಿ ರೂ.10 ಕೋಟಿ ಮನವಿ ಸಲ್ಲಿಸಲಾಗಿದೆ” ಎಂದು ತಿಳಿಸಿದರು.
“ಈಗಾಗಲೇ 4 ಜಿಲ್ಲೆಗಳಲ್ಲಿ 860 ಸೊಸೈಟಿಗಳಿವೆ. ಇದರಲ್ಲಿ ಹಲವು ಸೊಸೈಟಿಗಳು ಕಾರ್ಯನಿರ್ವಹಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿ 3 ಸೊಸೈಟಿಗಳನ್ನು ಸ್ಥಾಪಿಸಲಾಗುವುದು. ಒಟ್ಟಾರೆಯಾಗಿ ಹಾಲಿನ ಉತ್ಪಾದನೆಯನ್ನು 2.43 ಲಕ್ಷ ಲೀಟರ್‌ನಿಂದ 5 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ” ಎಂದರು.