Home ನಮ್ಮ ಜಿಲ್ಲೆ ಬಳ್ಳಾರಿ ಪ್ರವಾಸಕ್ಕೆ ಹೊಸ ಆಕರ್ಷಣೆ: ‘ರೇವಾ’ ರಾಜ್ಯಭಾರ ಶುರು

ಬಳ್ಳಾರಿ ಪ್ರವಾಸಕ್ಕೆ ಹೊಸ ಆಕರ್ಷಣೆ: ‘ರೇವಾ’ ರಾಜ್ಯಭಾರ ಶುರು

0

ಮಲ್ಲಿಕಾರ್ಜುನ ಚಿಲ್ಕರಾಗಿ
ಬಳ್ಳಾರಿ: ವಿಶ್ವ ಪಾರಂಪರಿಕ ತಾಣ ಹಂಪಿಯ ಅನತಿ ದೂರದಲ್ಲೇ ಇರುವ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನದಲ್ಲಿನ ಎರಡು ಹುಲಿಗಳು ಇತ್ತೀಚೆಗೆ ಮೃತಪಟ್ಟಿದ್ದವು. ಈಗ ಹೊಸ ಅತಿಥಿಗಳ ಆಗಮನವಾಗಿದೆ. ಅದರಲ್ಲೂ ಅಂತಾರಾಷ್ಟ್ರೀಯ ಹುಲಿ ದಿನವಾದ ಜುಲೈ 29ರಂದು ಯಂಗ್ ಟೈಗರ್ ‘ರೇವಾ’ ರಾಜ್ಯಭಾರ ಆರಂಭವಾಗಿದೆ.

ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿದ್ದ ಮೃಗಾಲಯ 2015 ರಿಂದ ಹಂಪಿ ಸಮೀಪದ ಕಮಲಾಪುರಕ್ಕೆ ಶಿಫ್ಟ್ ಆಗಿದೆ. ಬಿಳಿಕಲ್ ವೆಸ್ಟ್ ಫಾರೆಸ್ಟ್‌ನಲ್ಲಿ ಸುಮಾರು 350 ಎಕರೆ ಪ್ರದೇಶದಲ್ಲಿ ಅಟಲ್‌ಬಿಹಾರಿ ವಾಜಪೇಯಿ ಹೆಸರಿನಲ್ಲಿ ಹೊಸ ಮೃಗಾಲಯ ತಲೆ ಎತ್ತಿದೆ.

ಆರಂಭದಿಂದಲೂ ವಯಸ್ಕ ಹುಲಿಗಳನ್ನು ಇಲ್ಲಿಗೆ ತಂದು ಸಫಾರಿಗೆ ಬಳಕೆ ಮಾಡಲಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಯುವ ವಯಸ್ಸಿನ ಎರಡು ಹುಲಿ ಮರಿಗಳನ್ನು ಪಡೆಯಲಾಗಿದೆ. ಮಂಗಳೂರಿನ ಪಿಳಿಕುಳದಿಂದ ಅವುಗಳನ್ನು ತರಲಾಗಿದ್ದು, ಎರಡು ಹುಲಿಮರಿಗಳ ಬದಲಿಗೆ ಇಲ್ಲಿಂದ 4 ಕರಡಿ, ತೋಳಗಳನ್ನು ನೀಡಲಾಗಿದೆ. ರೇವಾ ಹೆಸರಿನ 8 ವರ್ಷದ ಗಂಡು ಹುಲಿ ಈಗಾಗ ಮೃಗಾಲಯದ ಪ್ರಮುಖ ಆಕರ್ಷಣೆ.

ಕಳೆದ 21 ದಿನಗಳ ಕಾಲ ಕ್ವಾರಂಟೈನ್‌ನಲ್ಲಿಟ್ಟು ಇಲ್ಲಿನ ಪ್ರದೇಶಕ್ಕೆ ಹೊಂದಿಕೊಳ್ಳುವ ತರಬೇತಿಯನ್ನು ಹುಲಿಗೆ ನೀಡಲಾಗಿದೆ. ಈಗ ಅಂತರಾಷ್ಟ್ರೀಯ ಹುಲಿ ದಿನವಾದ ಮಂಗಳವಾರ ಈ ಹುಲಿಮರಿಯನ್ನು ಸಫಾರಿಗೆ ಬಿಡಲಾಗಿದೆ. ಮತ್ತೊಂದು ಹೆಣ್ಣು ಹುಲಿ ಇನ್ನು ಒಂದು ವಾರದಲ್ಲಿ ಇಲ್ಲಿಗೆ ಬಂದು ಸೇರುವ ನಿರೀಕ್ಷೆ ಇದೆ.

ಸದ್ಯ 4 ಟೈಗರ್ಸ್‌: ಹಂಪಿ ಝೂನಲ್ಲಿ ಕೆಲ ತಿಂಗಳ ಹಿಂದೆ ‘ದೇವಿ’ ಹೆಣ್ಣು ಹುಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿತ್ತು. ಇದರ ಬೆನ್ನಲ್ಲೇ ಮೂರು ದಿನಗಳ ಹಿಂದೆ ‘ಸಿಂಧು’ ಎನ್ನುವ ಮತ್ತೊಂದು ಹೆಣ್ಣು ಹುಲಿ ಸಾವನಪ್ಪಿತ್ತು. ಈಗ ಝೂನಲ್ಲಿ 8 ವರ್ಷದ ರೇವಾ ಸೇರಿ, ವಾಯುಪುತ್ರ (14), ಚಾಮುಂಡಿ (15), ಅರ್ಜುನ (13) ಹುಲಿಗಳಿವೆ. ಹುಲಿಗಳ ಜೀವಿತಾವಧಿಯೇ 14-16 ವರ್ಷಗಳಿದ್ದು, ವಯಸ್ಕ ಹುಲಿಗಳೇ ಇಲ್ಲಿ ಹೆಚ್ಚಾಗಿದ್ದವು. ಆದರೆ, ಈ ಬಾರಿ ಯಂಗ್ ಟೈಗರ್‌ಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಹೆಣ್ಣು-ಗಂಡು ಹುಲಿಗಳಿರುವುದರಿಂದ ಸಂತಾನೋತ್ಪತ್ತಿಯ ನಿರೀಕ್ಷೆ ಇದೆ.

ಮತ್ತೊಬ್ಬ ಚಿಂಟೂ ಆಗಮನ: ಹಂಪಿ ಝೂನಲ್ಲಿ ಹುಲಿಗಳ ಜತೆಗೆ 5 ಸಿಂಹ, 8 ಚಿರತೆ, ಎರಡು ಜಿರಾಫೆ, ಹೈನಾ, ಕರಡಿ, ಜಿಂಕೆ ಸೇರಿ ತರಹೇವಾರಿ ಪ್ರಾಣಿಗಳಿವೆ. 5ಕ್ಕೂ ಹೆಚ್ಚು ನೀರಾನೆಗಳಿದ್ದು, ಈಗ ಮತ್ತೊಂದು ಚಿಂಟೂ ಹೆಸರಿನ ನೀರಾನೆಯೂ ಹೊಸ ಅತಿಥಿಯಾಗಿ ಆಗಮಿಸಿದೆ.

ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ರಾಜೇಶ ನಾಯ್ಕ ಮಾತನಾಡಿ, ವಯೋಸಹಜ ಕಾಯಿಲೆಯಿಂದ ಇತ್ತೀಚೆಗೆ ಎರಡು ಹುಲಿಗಳು ಸಾವನ್ನಪ್ಪಿದ್ದವು. ಹೀಗಾಗಿ ಇನ್ನು ಎರಡು ಹುಲಿಗಳಿಗೆ ಬೇಡಿಕೆ ಸಲ್ಲಿಸಿದ್ದೆವು. ನಮ್ಮಲ್ಲಿನ ಕರಡಿಗಳನ್ನು ನೀಡಿ ಪಿಳಿಕುಳ ಫಾರೆಸ್ಟ್‌ನಿಂದ 2 ಹುಲಿಗಳನ್ನು ಪಡೆದುಕೊಂಡಿದ್ದೇವೆ. ಈಗಾಗಲೇ ರೇವಾ ಹೆಸರಿನ ಒಂದು ಹುಲಿ ಆಗಮಿಸಿದೆ. ಇಂದಿನಿಂದ ಪ್ರವಾಸಿಗರ ದರ್ಶನಕ್ಕೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version