ಬಾಗಲಕೋಟೆ: ಮುಧೋಳದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು ಇನ್ನೊಂದೆಡೆ ತಮ್ಮ ಕಾರ್ಖಾನೆಗಳಿಗೆ ರಕ್ಷಣೆ ನೀಡಿದಲ್ಲಿ ಕಾರ್ಯಾರಂಭಕ್ಕೆ ಸಿದ್ಧ ಎಂದು ಕಾರ್ಖಾನೆಗಳವರು ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರೆ.
ರೈತರು ಒಪ್ಪಿಕೊಂಡರೆ ಕಾರ್ಖಾನೆ ಆರಂಭಿಸಲು ನಾವು ಸಿದ್ಧರಿದ್ದೇವೆ ಆದರೆ ಅದಕ್ಕೆ ಜಿಲ್ಲಾಡಳಿತ ಸೂಕ್ತ ರಕ್ಷಣೆ ನೀಡಬೇಕೆಂದು ಜಿಲ್ಲಾಧಿಕಾರಿ ಎಂ. ಸಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಕಾರ್ಖಾನೆ ಮಾಲೀಕರು, ಪ್ರತಿನಿಧಿಗಳು ಒತ್ತಾಯಿಸಿದರು.
ಸರ್ಕಾರ ಘೋಷಿಸಿರುವ ದರ ನೀಡಲು ನಾವು ಬದ್ಧರಾಗಿದ್ದೇವೆ. ಕಬ್ಬು ನುರಿಸುವ ಹಂಗಾಮು ಶುರುವಾದರೂ ಕಾರ್ಖಾನೆಗಳ ಆರಂಭಕ್ಕೆ ಅಡ್ಡಿಯುಂಟಾಗುತ್ತಿದೆ. ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ರೈತರು, ಕಾರ್ಖಾನೆ ಪ್ರತಿನಿಧಿಗಳ ಸಭೆ ನಡೆಸಿ ಒಮ್ಮತದ ನಿರ್ಣಯಕ್ಕೆ ಬಂದ ನಂತರವೇ ಕಾರ್ಖಾನೆಗಳು ಶುರು ಮಾಡಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಗೊಂದಲ ಇನ್ನೂ ಮುಂದವರಿದಿದೆ.
ನಮ್ಮ ಕಾರ್ಖಾನೆಗಳಿಗೆ ರೈತರು ಕಬ್ಬು ನೀಡಲು ಸಿದ್ಧರಿದ್ದಾರೆ ಆದರೆ ಹೋರಾಟದ ಕಾರಣ ಹಿಂದೇಟು ಹಾಕುತ್ತಿದ್ದಾರೆ. ಕಾರ್ಖಾನೆಗೆ ಕಬ್ಬು ಪೂರೈಸುವ ರೈತರೊಂದಿಗೆ ಚರ್ಚಿಸುತ್ತೇವೆ. ಅವರು ಒಪ್ಪದಿದ್ದರೆ ಕಾರ್ಖಾನೆ ಆರಂಭಿಸುವುದಿಲ್ಲ. ಆದರೆ ಅವರು ಸಿದ್ಧರಿರುವುದಾಗಿ ತಿಳಿಸಿದರೆ ಮಾತ್ರವೇ ಕಾರ್ಖಾನೆ ಆರಂಭಕ್ಕೆ ಜಿಲ್ಲಾಡಳಿತ ಸೂಕ್ತ ರಕ್ಷಣೆ ನೀಡಬೇಕು. ಕಬ್ಬು ಪೂರೈಸುವ ರೈತರು, ಸಾಗಿಸುವ ವಾಹನಗಳಿಗೆ ತೊಂದರೆ ಆಗದಂತೆ ರಕ್ಷಣೆ ನೀಡುವಂತೆ ಕಾರ್ಖಾನೆ ಪ್ರತಿನಿಧಿಗಳು ಮನವಿ ಮಾಡಿದರು.
ಸಭೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಅವರು, ಕಾರ್ಖಾನೆ ಆರಂಭ ವಿಳಂಬವಾಗುವುದರಿಂದ ರೈತರಿಗೂ ತೊಂದರೆ ಉಂಟಾಗಲಿದೆ. ಕಾರ್ಮಿಕರಿಗೂ ಸಮಸ್ಯೆ ಆಗುತ್ತದೆ. ಮುಂದೆ ಅದರ ಪರಿಣಾಮ ಬ್ಯಾಂಕ್‌ಗಳ ಮೇಲೆಯೂ ಬೀರುತ್ತದೆ. ಮುಖ್ಯಮಂತ್ರಿಗಳು ಎಲ್ಲರನ್ನು ವಿಶಾಸಕ್ಕೆ ಪಡೆದು ದರ ಘೋಷಿಸಿದ್ದಾರೆ. ಅದನ್ನು ನೀಡಲು ಕಾರ್ಖಾನೆಗಳು ಸಿದ್ಧವಿರುವಾಗ ರೈತರು ಹೋರಾಟ ಕೈಬಿಡಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಾವು ನಮ್ಮ ಕಾರ್ಖಾನೆಗಳಿಗೆ ಕಬ್ಬು ಪೂರೈಸುವ ರೈತರೊಂದಿಗೆ ಚರ್ಚಿಸಿ ಅವರು ಒಪ್ಪಿದರೆ ಕಾರ್ಖಾನೆ ಆರಂಭಿಸುತ್ತೇವೆ. ಅದಕ್ಕೆ ಬೇಕಾದ ಸೂಕ್ತ ರಕ್ಷಣೆಯನ್ನು ಜಿಲ್ಲಾಡಳಿತ ನೀಡಬೇಕೆಂದು ಮನವಿ ಮಾಡಿದರು.
