ಗಂಗಾವತಿ: ಮಹಿಳೆಯ ಮೇಲೆ ಪೆಂಡಾಲ್ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮುಸ್ಟೂರು ಕ್ಯಾಂಪ್‌ನಲ್ಲಿ ಮಧ್ಯಾಹ್ನ ನಡೆದಿದೆ. ತಾಲೂಕಿನ ಮುಸ್ಟೂರು ಕ್ಯಾಂಪ್ ನಲ್ಲಿ ಗ್ರಾಮಸ್ಥರು ನಾಲ್ಕು ದಿನಗಳ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ಆಯೋಜಿಸಿದ್ದರು, ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಆಗಮಿಸಿದ ಭಕ್ತರಿಗೆ ಅಡುಗೆ ತಯಾರಿಸುತ್ತಿದ್ದರು, ಊಟದ ವ್ಯವಸ್ಥೆ ಮಾಡಲು ಕಾರ್ಯಕ್ರಮದ ವೇದಿಕೆಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಪೆಂಡಾಲ್ ಬಿರುಗಾಳಿಗೆ ಸಿಲುಕಿ ಮೇಲಕ್ಕೆ ಹಾರಿ ಕೆಳಗೆ ಬಿದ್ದ ಪರಿಣಾಮ ಅಡುಗೆ ಕಾರ್ಯದಲ್ಲಿ ನಿರತರಾಗಿದ್ದ ಮಹಿಳೆ ಅಂಜಿನಮ್ಮ( 51) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಾಮೀದಾಬೀ(48) ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿದೆ. ಶೃತಿ(23),ದುರುಗಮ್ಮ,(40),ಶಾರದ(30) ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.