ಕುಷ್ಟಗಿ: ವಿದ್ಯಾರ್ಥಿಗಳು ಬಸ್ ಸೌಕರ್ಯ ಇಲ್ಲದೇ ಜೆಸಿಬಿಯ ಬಕೆಟ್ ಮತ್ತು ಕ್ಯಾಬಿನಲ್ಲಿ ಕುಳಿತು ಶಾಲೆಗೆ ತೆರಳಿದರು.
ತಾಲೂಕಿನ ಶಾಖಾಪುರ ಗ್ರಾಮದ ೨೦ಕ್ಕೆ ಹೆಚ್ಚು ವಿದ್ಯಾರ್ಥಿಗಳು ಪಕ್ಕದ ಯಲಬುರ್ಗಾ ತಾಲೂಕಿನ ಹಿರೇಹಳ್ಳಿ ಗ್ರಾಮದ ಶಾಲೆಗೆ ತೆರಳಲು ಬಸ್ ಸೌಕರ್ಯವಿಲ್ಲದೇ ಪರದಾಡಿದರು.
ಶಾಲೆಗೆ ಪ್ರತಿನಿತ್ಯ ಕಾಲ್ನಡಿಗೆ, ಜೆಸಿಬಿ, ಲಾರಿ, ಜೀಪ್ ತೆರಿದಂತೆ ಇನ್ನಿತರ ವಾಹನಗಳಲ್ಲಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಬಸ್ ಸೌಕರ್ಯ ಕಲ್ಪಿಸಿ ಕೊಡಬೇಕಾದ ಕಲ್ಯಾಣ ಕರ್ನಾಟಕ ಸಾರಿಗೆ ಕುಷ್ಟಗಿ ಘಟಕದ ವ್ಯವಸ್ಥಾಪಕರು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಈ ರೀತಿ ಪ್ರಯಾಣ ಅನಾಹುತಕ್ಕೆ ಕಾರಣವಾಗಬಹುದು ಎಂದು ಪಾಲಕರು ಭಯದಲ್ಲಿದ್ದಾರೆ. ಕೂಡಲೇ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.