ಕುಷ್ಟಗಿ: ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ವಹಿಸಿರುವ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹಿಂದುಳಿದ ವರ್ಗಗಳ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಬಿಜಕಲ್ ಗ್ರಾಮದ ತಾತ್ಕಾಲಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಜೆಎಂ ಕಾಮಗಾರಿಯನ್ನು ಕಳಪೆ ಮಟ್ಟದಿಂದ ಮಾಡಲಾಗಿದೆ ಎಂಬ ದೂರು ಬಂದಿದ್ದು, ಈ ಬಗ್ಗೆ ಶೀಘ್ರ ಅಧಿಕಾರಿಗಳಿಂದ ಸಮಗ್ರ ಸರ್ವೆ ನಡೆಸಿ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಪಂ ಪಿಡಿಒಗಳ, ಗುತ್ತಿಗೆದಾರರ ಸಭೆ ನಡೆಸಿ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ತಪ್ಪಿತಸ್ಥ ಗುತ್ತಿಗೆದಾರರ ಲೈಸೆನ್ಸ್ ಕಪ್ಪುಪಟ್ಟಿಗೆ ಸೇರಿಸಲು ಹಿಂದೆ ಸರಿಯುವುದಿಲ್ಲ ಎಂದರು.