Home ನಮ್ಮ ಜಿಲ್ಲೆ ವಿಜಯಪುರ ಮದರಿ ಗ್ರಾಮದ ನದಿ ತೀರದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ

ಮದರಿ ಗ್ರಾಮದ ನದಿ ತೀರದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ

0
11

ಗ್ರಾಮಸ್ಥರಲ್ಲಿ ಭೀತಿ, ತ್ವರಿತ ಕಾರ್ಯಾಚರಣೆಗೆ ಒತ್ತಾಯ

ವರದಿ : ಹಣಮಂತ ನಲವಡೆ

ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದ ಮದರಿ ಗ್ರಾಮದ ವ್ಯಾಪ್ತಿಯ ಕಬ್ಬಿನ ಗದ್ದೆಗಳ ಹತ್ತಿರ ಚಿರತೆ ಕಾಣಿಸಿಕೊಂಡಿರುವ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ಎರಡು–ಮೂರು ದಿನಗಳಿಂದ ಈ ಭಾಗದಲ್ಲಿ ಚಿರತೆಯ ಓಡಾಟ ಕಂಡುಬರುತ್ತಿದ್ದು, ರೈತರು ಮತ್ತು ಸಾರ್ವಜನಿಕರು ಭೀತಿಯ ವಾತಾವರಣದಲ್ಲಿ ದಿನಕಳೆಯುವಂತಾಗಿದೆ.

ಮದರಿ ಗ್ರಾಮದ ಸಿದ್ದಪ್ಪ ಮೇಟಿ ಎಂಬುವರ ಜಮೀನಿನ ಬಳಿ ಚಿರತೆ ಕಾಣಿಸಿಕೊಂಡಿದ್ದು, ಈ ದೃಶ್ಯವನ್ನು ಗ್ರಾಮ ಯುವ ಮುಖಂಡ ಶಿವು ಕನ್ನೊಳ್ಳಿ ಅವರು ಕಾರಿನಲ್ಲಿ ಕುಳಿತುಕೊಂಡಿದ್ದ ವೇಳೆ ತಮ್ಮ ಮೊಬೈಲ್‌ನಲ್ಲಿ ಫೋಟೊವಾಗಿ ಸೆರೆ ಹಿಡಿದಿದ್ದಾರೆ. ಈ ಚಿತ್ರಗಳು ಗ್ರಾಮದಲ್ಲಿ ವೇಗವಾಗಿ ಹರಡಿದ್ದು, ಆತಂಕ ಇನ್ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ:  ಸಂಘರ್ಷ ರಹಿತ ರಾಜ್ಯಪಾಲರ ನಡೆ: ಗಣರಾಜ್ಯ ಭಾಷಣ ನಿರಾಳ

ರಸ್ತೆ ಪಕ್ಕದಲ್ಲೇ ಚಿರತೆ ಓಡಾಟ: ಚಿರತೆ ರಸ್ತೆ ಪಕ್ಕದಲ್ಲೇ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ. ನಿತ್ಯ ಕೃಷಿ ಕೆಲಸಗಳಿಗೆ, ಹಾಲು ಕರುಗಳನ್ನು ಮೇಯಿಸಲು ಮತ್ತು ಶಾಲೆಗೆ ಹೋಗುವ ಮಕ್ಕಳ ಸಂಚಾರ ಇರುವ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡಿರುವುದರಿಂದ ರೈತರು ಮತ್ತು ಮಹಿಳೆಯರು ಹೊರಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆಗೆ ಮಾಹಿತಿ: ಚಿರತೆ ಕಾಣಿಸಿಕೊಂಡ ವಿಷಯವನ್ನು ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. ಆದರೆ ಇನ್ನೂ ಸ್ಪಷ್ಟವಾದ ಕಾರ್ಯಾಚರಣೆ ಆರಂಭವಾಗದಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಮಾನವ–ಆನೆ ಸಂಘರ್ಷ ತಗ್ಗಿಸಲು ಮಹತ್ವದ ಹೆಜ್ಜೆ

ತ್ವರಿತ ಕಾರ್ಯಾಚರಣೆಗೆ ಒತ್ತಾಯ: ಗ್ರಾಮಸ್ಥರು ಹಾಗೂ ರೈತರು, ತಾಲೂಕು ಆಡಳಿತ ಮತ್ತು ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಚಿರತೆ ಸೆರೆ ಹಿಡಿಯಲು ಬೋನು ಅಳವಡಿಕೆ, ಡ್ರೋನ್ ಅಥವಾ ಕ್ಯಾಮೆರಾ ಟ್ರ್ಯಾಪ್ ಮೂಲಕ ನಿಗಾವಹಿಸುವುದು ಹಾಗೂ ರಾತ್ರಿ ಪಾಳಿಯಲ್ಲಿ ಗಸ್ತು ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.

ಅಪಘಾತ ಮತ್ತು ಮಾನವ–ವನ್ಯಜೀವಿ ಸಂಘರ್ಷದ ಆತಂಕ: ಕಬ್ಬಿನ ಗದ್ದೆಗಳು ಮತ್ತು ನದಿ ತೀರದ ಪ್ರದೇಶಗಳು ಚಿರತೆಗಳಿಗೆ ಸಹಜ ಅಡಗಾಣಿಕೆಯಾಗಿ ಪರಿಣಮಿಸಿರುವುದರಿಂದ, ಮಾನವ–ವನ್ಯಜೀವಿ ಸಂಘರ್ಷ ಉಂಟಾಗುವ ಅಪಾಯವಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹವಾಗಿದೆ.