ಕೊನೆಗೂ ಟ್ರಂಪ್‌ಗೆ ‘ನೊಬೆಲ್’ ಸ್ಪರ್ಶ?

0
1

ವೆನೆಜುವೆಲಾ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಗೌರವ ಪ್ರದಾನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿತೇ ಎಂಬ ಪ್ರಶ್ನೆ ಇದೀಗ ಜಾಗತಿಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೌರವ ಸೂಚಕವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರದಾನ ಮಾಡಿದ್ದಾರೆ ಎಂಬ ಸುದ್ದಿ ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತಿದೆ.

ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾದೊ, “ನಾನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಿಗೆ ನನ್ನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೌರವ ಸೂಚಕವಾಗಿ ಪ್ರದಾನ ಮಾಡಿದ್ದೇನೆ” ಎಂದು ಹೇಳಿದರು. ಆದರೆ ಟ್ರಂಪ್ ಅದನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಮಚಾದೊ ನಿರಾಕರಿಸಿದರು.

ಇದನ್ನೂ ಓದಿ: ‘ಮಹಾದಾನಿ’ ವೃದ್ಧೆ ಚಂದ್ರವ್ವ ಕೊಲೆ: ಕುಟುಂಬಸ್ಥರಿಂದಲೇ ಹತ್ಯೆ ವಿಡಿಯೋ ನೋಡಿ: ‘ಮಹಾದಾನಿ’ ವೃದ್ಧೆ ಚಂದ್ರವ್ವ ಕೊಲೆ: ಕುಟುಂಬಸ್ಥರಿಂದಲೇ ಹತ್ಯೆ

ಶ್ವೇತಭವನದಲ್ಲೇ ಉಳಿದ ನೊಬೆಲ್ ಪದಕ: ಮಚಾದೊ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಶ್ವೇತಭವನದಲ್ಲೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಶ್ವೇತಭವನದ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ, ಆ ಪದಕವು ಪ್ರಸ್ತುತ ಅಧ್ಯಕ್ಷ ಟ್ರಂಪ್ ಅವರ ಬಳಿಯೇ ಇದೆ ಮತ್ತು ಅವರು ಅದನ್ನು ಇಟ್ಟುಕೊಂಡಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಶ್ವೇತಭವನದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಹಿಂದಿನ ಉದ್ವಿಗ್ನತೆ, ಈಗ ರಾಜಕೀಯ ಸಮಾಧಾನ?: ಈ ನೊಬೆಲ್ ಪ್ರಶಸ್ತಿಯೇ ಹಿಂದೆ ಮಚಾದೊ ಮತ್ತು ಟ್ರಂಪ್ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು ಎನ್ನಲಾಗಿದೆ. 2025ರಲ್ಲಿ ಮಚಾದೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದಾಗ, ಈ ಗೌರವವನ್ನು ಟ್ರಂಪ್ ಬಹುಕಾಲದಿಂದಲೇ ಬಯಸುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಮಚಾದೊ ಅವರಿಗೆ ಪ್ರಶಸ್ತಿ ಸಿಕ್ಕಿದ್ದರಿಂದ ಟ್ರಂಪ್ ವೈಯಕ್ತಿಕವಾಗಿ ನಿರಾಸೆಗೊಂಡಿದ್ದರು ಎಂದು ಶ್ವೇತಭವನಕ್ಕೆ ಹತ್ತಿರವಿರುವ ಮೂಲಗಳು ಹೇಳಿದ್ದವು.

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

ಇನ್ನು ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ನಂತರ ಟ್ರಂಪ್ ಮತ್ತು ಮಚಾದೊ ನಡುವಿನ ರಾಜಕೀಯ ಅಂತರ ಹೆಚ್ಚಾಗಿತ್ತು. ಈ ಹಿನ್ನೆಲೆಗಳಲ್ಲಿ ಈಗ ನಡೆದಿರುವ ನೊಬೆಲ್ ಪದಕ ಪ್ರದಾನವನ್ನು ಕೇವಲ ಗೌರವದ ನಡೆ ಎಂದು ಮಾತ್ರವಲ್ಲ, ಟ್ರಂಪ್ ಅವರನ್ನು ಸಮಾಧಾನಪಡಿಸಲು ಹಾಗೂ ಅಮೆರಿಕದ ಬೆಂಬಲವನ್ನು ಪುನಃ ಬಲಪಡಿಸಲು ತೆಗೆದುಕೊಳ್ಳಲಾದ ಉದ್ದೇಶಪೂರ್ವಕ ರಾಜಕೀಯ ಕ್ರಮ ಎಂದು ವಿಶ್ಲೇಷಿಸಲಾಗುತ್ತಿದೆ.

ನೊಬೆಲ್ ಸಮಿತಿಯ ನಿಯಮವೇನು?: ಈ ಬೆಳವಣಿಗೆಯ ನಡುವೆ ನಾರ್ವೇಜಿಯನ್ ನೊಬೆಲ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, “ನೊಬೆಲ್ ಪ್ರಶಸ್ತಿ ವಿಜೇತರು ತಮ್ಮ ಬಹುಮಾನ ಹಣವನ್ನು ಬಯಸುವವರೊಂದಿಗೆ ಹಂಚಿಕೊಳ್ಳಬಹುದು. ಆದರೆ ನೊಬೆಲ್ ಪದಕ ಅಥವಾ ಪ್ರಶಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಲು ಅಥವಾ ಹಂಚಿಕೊಳ್ಳಲು ಅವಕಾಶವಿಲ್ಲ” ಎಂದು ಹೇಳಿದೆ. ಕೆಲವು ದಿನಗಳ ಹಿಂದಷ್ಟೇ ಮಚಾದೊ, ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:  ದಾಂಡೇಲಿ: ಹಾರ್ನ್‌ಬಿಲ್ ಪಕ್ಷಿಗಳ ಹಬ್ಬಕ್ಕೆ ಇಂದು ಚಾಲನೆ

ಟ್ರಂಪ್ ಪ್ರತಿಕ್ರಿಯೆ ಏನು?: ಈ ವಿಚಾರದ ಕುರಿತು ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿದ್ದು, “ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರನ್ನು ಭೇಟಿಯಾಗಿರುವುದು ನನಗೆ ದೊಡ್ಡ ಗೌರವ. ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ, ಅದಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ” ಎಂದು ಬರೆದಿದ್ದಾರೆ. ಆದರೆ ಪ್ರಶಸ್ತಿಯನ್ನು ತಾವು ಸ್ವೀಕರಿಸಿದ್ದಾರೆಯೇ ಎಂಬ ಬಗ್ಗೆ ಟ್ರಂಪ್ ಯಾವುದೇ ನೇರ ಹೇಳಿಕೆ ನೀಡಿಲ್ಲ.

ನೊಬೆಲ್ ಹೆಬ್ಬಯಕೆ ಇನ್ನೂ ಜೀವಂತ: ಡೊನಾಲ್ಡ್ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯುವ ಬಯಕೆಯನ್ನು ಹಲವು ಬಾರಿ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು ಎಂಬುದು ಗಮನಾರ್ಹ. ಆದರೆ ನೊಬೆಲ್ ಸಮಿತಿಯ ನಿಯಮಗಳ ಪ್ರಕಾರ, ಪ್ರಶಸ್ತಿಯನ್ನು ವರ್ಗಾಯಿಸುವುದು ಕಾನೂನುಬಾಹಿರವಾಗಿರುವುದರಿಂದ, ಈ ಘಟನೆಯನ್ನು ಸಾಂಕೆತಿಕ ಗೌರವ, ರಾಜಕೀಯ ಸಂದೇಶ ಮತ್ತು ರಾಜತಾಂತ್ರಿಕ ತಂತ್ರ ಎಂಬ ಮೂರು ಆಯಾಮಗಳಲ್ಲಿ ನೋಡಲಾಗುತ್ತಿದೆ.

ಇದನ್ನೂ ಓದಿ:  ಗಿಲೆನ್–ಬಾರಿ ಸಿಂಡ್ರೋಮ್ ರೋಗಿಗಳಿಗೆ ದುಬಾರಿ ಚಿಕಿತ್ಸೆ ಉಚಿತ

ಈ ಮೂಲಕ ಟ್ರಂಪ್‌ಗೆ ಅಧಿಕೃತವಾಗಿ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿಲ್ಲವಾದರೂ, “ನೊಬೆಲ್ ಸ್ಪರ್ಶ” ಮಾತ್ರ ಅವರಿಗೆ ಸಿಕ್ಕಿದೆ ಎನ್ನುವ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

Previous article‘ಮಹಾದಾನಿ’ ವೃದ್ಧೆ ಚಂದ್ರವ್ವ ಕೊಲೆ: ಕುಟುಂಬಸ್ಥರಿಂದಲೇ ಹತ್ಯೆ