ಕ್ರೀಡಾ ಲೋಕದಲ್ಲಿ ನಡೆಯುವ ವಿಚಿತ್ರ ಘಟನೆಗಳು ಕೆಲವೊಮ್ಮೆ ನಗೆಪಾಟಲಿಗೆ, ಮತ್ತೊಮ್ಮೆ ಆಕ್ರೋಶಕ್ಕೆ ಕಾರಣವಾಗುತ್ತವೆ. ಆದರೆ, ಗೆದ್ದ ತಂಡದ ಟ್ರೋಫಿಯನ್ನೇ ಕದ್ದು ಅದಕ್ಕಾಗಿ ಪ್ರಶಸ್ತಿ ಪಡೆಯುವುದು ಎಂಬುದು ಕೇಳಲು ವಿಚಿತ್ರ ಅನಿಸಿದರೂ, ಪಾಕಿಸ್ತಾನದಲ್ಲಿ ಇದು ನಿಜವಾಗಿದೆ.
2025ರ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಗೆದ್ದ ಟ್ರೋಫಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಕದ್ದೊಯ್ದಿದ್ದಾರೆ ಎಂಬುದು ಕೇವಲ ಸುದ್ದಿಯಾಗಿ ಉಳಿದಿಲ್ಲ, ಇದೀಗ ಈ ‘ಸಾಹಸ’ಕ್ಕಾಗಿ ನಖ್ವಿಗೆ ಪಾಕಿಸ್ತಾನದ ಪ್ರತಿಷ್ಠಿತ ‘ಶಹೀದ್ ಝುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಗೋಲ್ಡ್ ಮೆಡಲ್’ ನೀಡಿ ಗೌರವಿಸಲಾಗುತ್ತಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದಂತಾಗಿದೆ.
ಈ ಘಟನೆಯು ಕ್ರೀಡಾ ಸ್ಫೂರ್ತಿ ಮತ್ತು ನೈತಿಕತೆಗೆ ಎದುರಾಗಿ ನಿಂತಿದೆ. ಸಾಮಾನ್ಯವಾಗಿ, ಕ್ರೀಡೆಯಲ್ಲಿ ನ್ಯಾಯಯುತವಾಗಿ ಸ್ಪರ್ಧಿಸಿ ಗೆದ್ದವರಿಗೆ ಅಥವಾ ಗಮನಾರ್ಹ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಆದರೆ ಇಲ್ಲಿ ಗೆದ್ದ ತಂಡದ ಟ್ರೋಫಿಯನ್ನೇ ಅಕ್ರಮವಾಗಿ ವಶಪಡಿಸಿಕೊಂಡಿದ್ದಕ್ಕೆ ಪ್ರಶಸ್ತಿ ನೀಡಲಾಗುತ್ತಿದೆ. ಏಷ್ಯಾ ಕಪ್ ಫೈನಲ್ ಪಂದ್ಯದ ನಂತರ ಟ್ರೋಫಿ ಹಸ್ತಾಂತರದ ಸಂದರ್ಭದಲ್ಲಿ ನಡೆದ ಈ ವಿವಾದಾತ್ಮಕ ಘಟನೆಗೆ ನಖ್ವಿ ತೋರಿದ ‘ತತ್ವಬದ್ಧ ಮತ್ತು ಧೈರ್ಯಶಾಲಿ ನಿಲುವು’ ಪ್ರಶಸ್ತಿಗೆ ಕಾರಣವಾಯಿತು ಎಂದು ಸಿಂಧ್ ಮತ್ತು ಕರಾಚಿ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ಗಳ ಅಧ್ಯಕ್ಷ ಘುಲಾಂ ಅಬ್ಬಾಸ್ ಜಮಾಲ್ ಘೋಷಿಸಿದ್ದಾರೆ.
ಅಸಲಿಗೆ ಇದೊಂದು ನಾಚಿಕೆಗೇಡಿನ ಘಟನೆ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಹಾಗೂ ಕ್ರೀಡಾ ಸಂಬಂಧಗಳು ಈಗಾಗಲೇ ಹದಗೆಟ್ಟಿರುವಾಗ, ನಖ್ವಿಯ ಈ ನಡೆ ‘ರಾಷ್ಟ್ರೀಯ ಹೆಮ್ಮೆಯನ್ನು ಮರುಸ್ಥಾಪಿಸಿದೆ’ ಎಂದು ಜಮಾಲ್ ಹೇಳಿರುವುದು ಹಾಸ್ಯಾಸ್ಪದ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿಶ್ವದಾದ್ಯಂತ ಕ್ರೀಡಾಭಿಮಾನಿಗಳು ನಖ್ವಿ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಭಾರತ-ಪಾಕ್ ಕ್ರಿಕೆಟ್ ಸಂಬಂಧಗಳಲ್ಲಿ ಮತ್ತಷ್ಟು ಬಿರುಕು ಮೂಡಿಸುವುದು ಖಚಿತ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಾದು ನೋಡಬೇಕು.