ಬೆಂಗಳೂರು: ಕಿರುತೆರೆಯ ಕಲಾವಿದರಿಗೆ ಸೈಟ್ ಹಾಗೂ ಮನೆ ಕನಸು ತೋರಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಆಸ್ತಿ ದಂಧೆಯೊಂದು ಬೆಳಕಿಗೆ ಬಂದಿದೆ. ನಟ-ನಟಿಯರಿಗೆ ಸೈಟ್ ಹೆಸರಿನಲ್ಲಿ ಹಣ ಸಂಗ್ರಹಿಸಿ ನಕಲಿ ಲೇಔಟ್ ಪ್ಲಾನ್ ಯೋಜನೆ ರೂಪಿಸಿ ನಕಲಿ ದಾಖಲೆಗಳ ಆಧಾರದ ಮೇಲೆ ಭಾರೀ ಮೊತ್ತದ ಹಣ ಸಂಗ್ರಹಿಸಿ ವಂಚಿಸಿರುವ ಘಟನೆ ನಡೆದಿದೆ
ಈ ಕುರಿತಂತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 139 ಕ್ಕೂ ಹೆಚ್ಚು ಕಿರುತೆರೆ ಕಲಾವಿದರನ್ನು ನಕಲಿ ಸೈಟ್ ಜಾಲಕ್ಕೆ ಸಿಲುಕಿಲಾಗಿದೆ. ಸೈಟ್ ಕೊಡಿಸುತ್ತೇನೆಂದು ಹೇಳಿದ ಬಿಲ್ಡರ್ ಭಗೀರಥ ಹಾಗೂ ಸಂಜೀವ್ ತಗಡೂರು ಅವರನ್ನು ನಂಬಿದ ಕಲಾವಿದರೀಗ ಮೋಸ ಹೋಗಿದ್ದಾರೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸದಸ್ಯೆ ಭಾವನ ಬೆಳಗೆರೆಯವರು ಕೂಡ ಈ ಜಾಲಕ್ಕೆ ಸಿಲುಕಿದ್ದು, ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 139 ಕಿರುತೆರೆ ಕಲಾವಿದರಿಂದ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪ ಎದುರಾಗಿದೆ. ಆರೋಪಿಗಳಾದ ಭಗೀರಥ, ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ ಮತ್ತು ಉಮಾಕಾಂತ್ ವಿರುದ್ಧ ಪ್ರಕರಣ ದಾಖಲಾಗಿದೆ
ಆರೋಪಿಗಳು ಕಿರುತೆರೆ ನಟ–ನಟಿಯರ ವಿಶ್ವಾಸಗಳಿಸಲು ಮೊದಲಿನಿಂದಲೇ ಕಲಾವಿದರ ಸಂಪರ್ಕದಲ್ಲಿದ್ದವರಾಗಿದ್ದರು. ಹಣ ಪಾವತಿಸಿದ ನಂತರ, ಖರೀದಿದಾರರಿಗೆ ನಕಲಿ ಲೇಔಟ್ ಪ್ಲಾನ್‌ಗಳು, ದಾಖಲೆ ಪತ್ರಗಳು, ಹಾಗೂ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಂಡಂತೆ ತೋರಿಸುವ ಕೃತಕ ದಾಖಲೆಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.