ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರ ಸುಗಮ ಸಂಚಾರಕ್ಕೆ ಅತ್ಯಂತ ಅಗತ್ಯವೆಂದು ಪರಿಗಣಿಸಲ್ಪಟ್ಟಿರುವ ಹುಬ್ಬಳ್ಳಿ–ಭಗತ್ ಕಿ ಕೋಟ್ (Bhagat Ki Kothi) ವಿಶೇಷ ರೈಲು ಸೇವೆಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸತತ ಪ್ರಯತ್ನಗಳು ಹಾಗೂ ಆಗ್ರಹವೇ ಪ್ರಮುಖ ಕಾರಣವಾಗಿದೆ.
ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ರೈಲ್ವೆ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ, ನೈಋತ್ಯ ರೈಲ್ವೆ ವಲಯದ (South Western Railway – SWR) ರೈಲ್ವೆ ಜನರಲ್ ಮ್ಯಾನೇಜರ್, ಡಿವಿಷನಲ್ ರೈಲ್ವೆ ಮ್ಯಾನೇಜರ್ (DRM) ಮತ್ತು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿವಿಧ ರೈಲ್ವೆ ಕಾಮಗಾರಿಗಳ ಪ್ರಗತಿ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ಸಚಿವರು ಹುಬ್ಬಳ್ಳಿ–ಭಗತ್ ಕಿ ಕೋಟ್ ರೈಲನ್ನು ನಿಯಮಿತಗೊಳಿಸುವಂತೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ರೈಲ್ವೆ ಇಲಾಖೆ ತಾತ್ಕಾಲಿಕವಾಗಿ ರೈಲು ಸೇವೆಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಲು ಒಪ್ಪಿಗೆ ನೀಡಿದೆ.
ಕೇಂದ್ರ ರೈಲ್ವೆ ಸಚಿವರ ಸಕಾರಾತ್ಮಕ ಪ್ರತಿಕ್ರಿಯೆ: “ಈ ರೈಲು ಸೇವೆ ಉತ್ತರ ಕರ್ನಾಟಕದ ಜನರಿಗೆ ಅತ್ಯಂತ ಅನುಕೂಲಕರವಾಗಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟು ಈ ರೈಲನ್ನು ನಿಯಮಿತಗೊಳಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ವಿಷಯವನ್ನು ತಂದಿದ್ದೇನೆ. ಅವರು ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದಗಳು. ಅವರ ಸಹಕಾರದಿಂದ ಹುಬ್ಬಳ್ಳಿ ಭಾಗದ ರೈಲ್ವೆ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ
ಹುಬ್ಬಳ್ಳಿ–ಭಗತ್ ಕಿ ಕೋಟ್ ರೈಲು ಸೇವೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಪ್ರಯಾಣಿಕರಿಗೆ ರಾಜಸ್ಥಾನದತ್ತ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಪ್ರಯಾಣಿಕರು ಈ ರೈಲಿನ ಶಾಶ್ವತ ಸಂಚಾರದ ನಿರೀಕ್ಷೆಯಲ್ಲಿದ್ದಾರೆ.