ಸಿಂಪಲ್ ಸುನಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಗತವೈಭವ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 14ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಯುವ ಪ್ರತಿಭೆ ದುಷ್ಯಂತ್ ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಗತವೈಭವ ಟೀಸರ್ ಅನಾವರಣ ಮಾಡುವ ಮೂಲಕ ಅಧಿಕೃತವಾಗಿ ಸಿನಿಮಾ ಬಿಡುಗಡೆಯ ದಿನಾಂಕ ಘೋಷಿಸಿದೆ ಚಿತ್ರತಂಡ.
`ಗತವೈಭವ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ಪ್ರಾಜೆಕ್ಟ್. ನನ್ನ ಬ್ಯಾನರ್‌ನಡಿ ಮಾಡಬೇಕು ಎಂದುಕೊಂಡ ಸಿನಿಮಾ ಇದು. ದುಷ್ಯಂತ್ ಈ ಪ್ರಾಜೆಕ್ಟ್ ಮಾಡಬೇಕು ಎಂದು ಬರೆದಿತ್ತು. ಅದಕ್ಕೆ ಇದು ಆಗಿದೆ. ನಾಲ್ಕು ಸಿನಿಮಾ ಮಾಡಿದಷ್ಟು ಈ ಜರ್ನಿ ಆಗಿದೆ. ಅಂದುಕೊಂಡ ರೀತಿ ಗತವೈಭವ ಮೂಡಿ ಬಂದಿದೆ. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಈ ಚಿತ್ರ ರಿಲೀಸ್ ಆದರೆ ಪ್ರಚಾರವಾಗುತ್ತವೆ.
ನಾನು ಆಡಿಯನ್ಸ್ ರೀತಿ ಈ ಸಿನಿಮಾಗಾಗಿ ಕಾಯುತ್ತಿದ್ದೇವೆ. ಪ್ರತಿ ದೃಶ್ಯವು ತುಂಬಾ ಚೆನ್ನಾಗಿ ಬಂದಿದೆ. ಪ್ರೊಡ್ಯೂಸರ್ ದೀಪಕ್ ತಿಮ್ಮಪ್ಪ ಚಿತ್ರಕ್ಕೆ ಎಲ್ಲವನ್ನೂ ಒದಗಿಸಿದ್ದಾರೆ. ದುಷ್ಯಂತ್ ನ್ಯಾಚುರಲ್ ಆರ್ಟಿಸ್ಟ್. ಆಶಿಕಾ ಫ್ಯಾಮಿಲಿ ತರ ಆಗಿದ್ದಾರೆ. ಚಿತ್ರದಲ್ಲಿ ಎಂಟರ್ಟೈನ್ಮೆಂಟ್, ಎಮೋಷನ್ ಎಲ್ಲವೂ ಇದೆ’ ಎನ್ನುತ್ತಾರೆ ಸಿಂಪಲ್ ಸುನಿ.
`ನೂರು ದಿನಕ್ಕೂ ಹೆಚ್ಚು ಕಾಲ ಶೂಟಿಂಗ್ ಮಾಡಿದ್ದೇವೆ. ಪೋರ್ಚುಗಲ್‌ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಗ್ರಾಫಿಕ್ ಕಾರಣದಿಂದ ಸಿನಿಮಾ ತಡವಾಯ್ತು. ನಿರೀಕ್ಷೆಗೂ ಮೀರಿದಷ್ಟು ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಗತವೈಭವ ಅದಕ್ಕೆ ಏನು ಬೇಕು ಅದು ತೆಗೆದುಕೊಳ್ತು. ಸುನಿ ಸರ್ ಅವರ ಹತ್ತು ಸಿನಿಮಾಗಳಿಗಿಂತ ಇದು ಬೆಸ್ಟ್ ಸಿನಿಮಾವಾಗಲಿದೆ.
ಆಶಿಕಾ ಅವರ ಕರಿಯರ್‌ನಲ್ಲೂ ಇದು ಬೆಸ್ಟ್ ಚಿತ್ರ ಎನಿಸಿಕೊಳ್ಳಲಿದೆ. ನವೆಂಬರ್ 14ಕ್ಕೆ ಗತವೈಭವ ತೆರೆಗೆ ಬರಲಿದೆ. ಅಕ್ಟೋಬರ್‌ನಲ್ಲಿ ಹಾಡುಗಳನ್ನು ರಿಲೀಸ್ ಮಾಡುವ ಯೋಚನೆ ನಡೆದಿದೆ’ ಎಂಬುದು ದುಷ್ಯಂತ್ ಮಾತು. ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಕಂಟೆಂಟ್ ಬ್ಲೆಂಡ್ ಮಾಡಿ ಸುನಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಕಥೆ-ಚಿತ್ರಕಥೆ ಜೊತೆಗೆ ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ತಿಮ್ಮಪ್ಪ ಹಾಗೂ ಸುನಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ, ಜೂಡಾ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ.