ಶಿವಮೊಗ್ಗ: ಜಿಎಸ್‌ಟಿಯಿಂದ ದೇಶದ ಆರ್ಥಿಕ ಅಭಿವೃದ್ಧಿಯಾಗಿದ್ದು, ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದಿದೆ. ಹಾಗಾಗಿ ವಿಶ್ವದ ಅನೇಕ ದೇಶಗಳ ಕೈಗಾರಿಕೆಗಳು ಭಾರತದತ್ತ ಮುಖ ಮಾಡಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಜಿಎಸ್‌ಟಿ ಕೌನ್ಸಿಲ್ ಹಾಗೂ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿಗಳ ಆಶಯದಂತೆ ದೇಶದ ಜನರಿಗೆ ಜಿಎಸ್‌ಟಿ 2.0ನಲ್ಲಿ ಐತಿಹಾಸಿಕ ಸುಧಾರಣೆಗಳನ್ನು ತಂದಿದ್ದು, ದೇಶದ ಜನತೆಗೆ ದಿನಬಳಕೆ ವಸ್ತುಗಳ ದರ ಇಳಿಕೆಗೆ ಕಾರಣರಾದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧಿ ಬಜಾರ್‌ನ ವ್ಯಾಪಾರಸ್ಥರಿಗೆ ಸಿಹಿ ತಿನ್ನಿಸಿ ಜಿಎಸ್‌ಟಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಎಸ್‌ಟಿ 2.0 ಒಂದು ಐತಿಹಾಸಿಕ ನಿರ್ಧಾರ. ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಜಿಎಸ್‌ಟಿ ಕೌನ್ಸಿಲ್ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ರಾಜ್ಯಗಳ ವಿತ್ತ ಸಚಿವರು ಅಲ್ಲಿ ಇದ್ದು ಅನುಮೋದನೆ ನೀಡಿದರೆ ಮಾತ್ರ ಜಿಎಸ್‌ಟಿ ಕೌನ್ಸಿಲ್ ಹಸಿರು ನಿಶಾನೆ ತೋರಿಸುತ್ತದೆ ಎಂದರು.
ಈಗಿನ ನಿರ್ಧಾರ ಇಡೀ ದೇಶದಲ್ಲಿ ಬಡ ಮಧ್ಯಮ ವರ್ಗದ ಸಾಮಾನ್ಯ ಜನರಿಗೆ ಅನುಕೂಲವಾಗಲಿದ್ದು, ದಿನಬಳಕೆಯ ಪ್ರಮುಖ ವಸ್ತುಗಳ ಮತ್ತು ಜೀವ ಉಳಿಸುವ ವೈದ್ಯಕೀಯ ವೆಚ್ಚಗಳ ಮೇಲೆ ಅತ್ಯಂತ ಪರಿಣಾಮ ಬೀರಲಿದೆ. ಜನಸಾಮಾನ್ಯರಿಗೆ ದರಗಳಲ್ಲಿ ಕಡಿಮೆಯಾಗುವುದರ ಜೊತೆಗೆ ಎಲ್ಲಾ ವ್ಯಾಪಾರಿಗಳಿಗೂ ತಮ್ಮ ಉತ್ಪಾದನೆಯ ಬೇಡಿಕೆ ಹೆಚ್ಚಲಿದೆ. ವರ್ತಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.
ಶಿವಪ್ಪನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಗಾಂಧಿ ಬಜಾರ್ ವರ್ತಕರಿಗೆ ಜಿಎಸ್‌ಟಿ ಬಗ್ಗೆ ಮಾಹಿತಿ ನೀಡಿ ಪ್ರಧಾನಿ ಮೋದಿ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.