ರವಿಚಂದ್ರನ್ ಪುತ್ರ ವಿಕ್ರಂ ಈ ವರ್ಷ ಇನ್ನಷ್ಟು ಸಕ್ರಿಯರಾಗುವ ಉತ್ಸಾಹದಲ್ಲಿದ್ದಾರೆ. ಅವರ ಅಭಿನಯದ ಮುಧೋಳ್ ಸದ್ಯ ಚಿತ್ರೀಕರಣದಲ್ಲಿದೆ. ಇದರ ಜೊತೆಗೆ ಮತ್ತೊಂದು ಹೊಸ ಚಿತ್ರದ ಸಿದ್ಧತೆ ಕೂಡ ಶುರುವಾಗಿದೆಯಂತೆ. ಈ ವಿಷಯವನ್ನು ತಮ್ಮ ಹುಟ್ಟುಹಬ್ಬದ ದಿನ ಘೋಷಿಸಿದರು.
ಇತ್ತೀಚೆಗೆ ಒಟ್ಟಿಗೇ ಅರ್ಧ ಡಜನ್ ಸಿನಿಮಾ ಶುರು ಮಾಡುವುದಾಗಿ ಉದ್ಯಮಿ ವಿಜಯ್ ಟಾಟಾ ಘೋಷಿಸಿದ್ದರು. ಅದು ನೆರವೇರಿದರೆ ಕನ್ನಡ ಚಿತ್ರರಂಗದ ಪಾಲಿಗೆ ಅದು ಶುಭಫಲವೇ. ಅವರು ನಿರ್ಮಿಸಲು ಹೊರಟಿರುವ ಸಿನಿಮಾಗಳಲ್ಲಿ ಒಂದು ಚಿತ್ರಕ್ಕೆ ವಿಕ್ರಂ ನಾಯಕ ನಟ. `ಮುಧೋಳ್ ಸಿನಿಮಾದಲ್ಲಿ ಸಾಕಷ್ಟು ಹೊಸಬರು ಕೆಲಸ ಮಾಡಿದ್ದೇವೆ. ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆಗಳಿವೆ.
ಮುಧೋಳ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕು, ಜನರಿಗೆ ತಲುಪಿಸಬೇಕು ಎಂದು ಕೊಲಬರೇಷನ್‌ಗಾಗಿ ಹುಡುಕುತ್ತಿದ್ದಾಗ ವಿಜಯ್ ಟಾಟಾ ಸಂಪರ್ಕವಾಯ್ತು. ಅವರಿಗೂ ಸಿನಿಮಾದ ಕಂಟೆಂಟ್ ಹಿಡಿಸಿ ನಮ್ಮೊಟ್ಟಿಗೆ ಕೈ ಜೋಡಿಸಿದ್ದಾರೆ. ಇದು ಮುಧೋಳ್ ಸಿನಿಮಾಗೆ ಸಂಬಂಧಿಸಿದ ಅಪ್‌ಡೇಟ್’ ಎಂದರು ವಿಕ್ರಂ. ಇದಕ್ಕೆ ರಕ್ಷಾ ಬಂಡವಾಳ ಹೂಡಿದ್ದು, ವಿಜಯ್ ಟಾಟಾ ಸಹಯೋಗದಲ್ಲಿ ಚಿತ್ರ ತೆರೆಗೆ ಬರಲಿದೆ.
ಕಾರ್ತಿಕ್ ರಾಜು ನಿರ್ದೇಶಕ. ಇದು ಮುಧೋಳ್ ಸಿನಿಮಾದ ಕಥೆಯಾದರೆ, ಖುದ್ದು ವಿಜಯ್ ನಿರ್ಮಿಸುತ್ತಿರುವ ಮತ್ತೊಂದು ಚಿತ್ರ ಸೆಟ್ಟೇರುವ ಹಂತದಲ್ಲಿದೆ. ಇದಕ್ಕೆ ಋಷಿ ಎಂಬುವವರು ನಿರ್ದೇಶನ ಮಾಡಲಿದ್ದಾರಂತೆ. ಈ ವರ್ಷದ ನನ್ನ ಹುಟ್ಟು ಹಬ್ಬಕ್ಕೆ ಈ ಎರಡು ವಿಷಯಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕೆನ್ನಿಸಿತು. ಹೇಳಿದ್ದೇನೆ ಎಂದರು ವಿಕ್ರಂ.


























