ವಿಐಎಸ್‌ಎಲ್ ಕಾರ್ಖಾನೆ ಉಳಿಸಲು ಬದ್ಧ: ಎಚ್ಡಿಕೆ

0
110

ಭದ್ರಾವತಿ: ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಬೇಕು. ಇದರೊಂದಿಗೆ ಇತಿಹಾಸದ ಗತವೈಭವ ಮರಳಿ ದೊರಕಿಸಿಕೊಡಬೇಕು. ಅವಲಂಬಿತ ಸಾವಿರಾರು ಕುಟುಂಬಗಳಿಗೆ ಉತ್ತಮ ರೀತಿಯ ಜೀವನೋಪಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರೆಯುತ್ತಿದ್ದು, ಕಾಲಾವಕಾಶ ನೀಡುವಂತೆ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡರು.
ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾನುವಾರ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದರು. ಉಕ್ಕು ಪ್ರಾಧಿಕಾರ ಹಾಗು ಕಾರ್ಖಾನೆ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೆರಳುವ ಮುನ್ನ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೧೮ ತಿಂಗಳಿನಿಂದ ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು.
ಕಾರ್ಮಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕಾರ್ಮಿಕರ ಆಶೋತ್ತರಗಳಿಗೆ ನಿರಂತರ ಧ್ವನಿಯಾಗಬೇಕು ಎಂಬ ನನ್ನ ಬದ್ಧತೆಯ ಮಾರ್ಗ ಸರಿ ದಾರಿಗೆ ಸಾಗುವವರೆಗೂ ವಿಶ್ರಾಂತಿ ಇಲ್ಲ ಎಂದು ಮತ್ತೊಮ್ಮೆ ವಾಗ್ದಾನ ಮಾಡುತ್ತಿದ್ದೇನೆ. ಕಾರ್ಖಾನೆಗೆ ಅಗತ್ಯ ಬಂಡವಾಳ ಹೂಡಿಕೆ ಹಾಗೂ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಈಗಾ ಗಲೇ ಚರ್ಚಿಸಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಹಾಗು ಜಿಲ್ಲೆಯಲ್ಲಿರುವ ಎಲ್ಲಾ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಖಾನೆ ಉಳಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಶಾರದಾ ಪರ‍್ಯನಾಯ್ಕ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮುಖಂಡರಾದ ಶಾರದ ಅಪ್ಪಾಜಿ, ಗೀತಾ ಸತೀಶ್, ಆರ್. ಕರುಣಾಮೂರ್ತಿ, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ಕಾಯಂ ಹಾಗು ಗುತ್ತಿಗೆ ಮತ್ತು ನಿವೃತ್ತ ಕಾರ್ಮಿಕರ ಸಂಘದ ಅಧ್ಯ ಕ್ಷರು, ಪದಾಧಿಕಾರಿಗಳು, ಕಾರ್ಮಿಕ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.

Previous articleನಾಲ್ವರು ರೈತರಿಂದ ಆತ್ಮಹತ್ಯೆ ಯತ್ನ
Next article೨೮ ಸಾವಿರ ಜನರಿಂದ ಅಮರನಾಥನ ದರ್ಶನ