ಕಾವೇರಿ ಹೋರಾಟಕ್ಕೆ ಡೊಳ್ಳಿನ ಸದ್ದು

0
19

ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಡೊಳ್ಳಿನ ಸದ್ದು ಮಾಡಿ ಕಾವೇರಿ ಹೋರಾಟ ಮುಂದುವರಿಸಿದರು.
ನಗರದ ಸರ್ ಎಂ ವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ನಿರಂತರ ಧರಣಿ ಬೆಂಬಲಿಸಿ ಸಂತೆ ಕಸಲಗೆರೆ ಹಾಗೂ ಕಾರಸವಾಡಿ ಗ್ರಾಮದ ಜನತೆ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರೈತ ಹಿತ ರಕ್ಷಣಾ ಸಮಿತಿಯ ಮುಖಂಡರ ಜೊತೆಗೂಡಿ ಮಾನವ ಸರಪಳಿ ರಚಿಸಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಮೆರವಣಿಗೆ ಹೊರಟರು.
ಡೊಳ್ಳಿನ ಸದ್ದಿನೊಂದಿಗೆ ಹೆಜ್ಜೆ ಹಾಕಿದ ಕಾವೇರಿ ಹೋರಾಟಗಾರರು ನಿರಂತರ ಧರಣಿ ಸ್ಥಳಕ್ಕೆ ತೆರಳಿ ಕೆಲಕಾಲ ಡೊಳ್ಳು ಕುಣಿತದ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕಾವೇರಿಯ ಉಗಮ ರಾಜ್ಯದ ಜನತೆ ನೀರಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ತಂದೊಡ್ಡಿರುವ ರಾಜ್ಯ ಸರ್ಕಾರ ನಿರ್ಲಕ್ಷ್ಯತನ ಬಿಟ್ಟು ಜವಾಬ್ದಾರಿಯುತ ಹೊಣೆಗಾರಿಕೆ ನಿರ್ವಹಿಸಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮುಂದಾಗಬೇಕು,ಕೃಷ್ಣರಾಜಸಾಗರದಿಂದ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ಸ್ಥಗಿತ ಮಾಡಬೇಕು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಸಂಕಷ್ಟ ಸನ್ನಿವೇಶದಲ್ಲಿ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಂತೆಕಸಲಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ್, ಸತೀಶ್, ಪಾರ್ವತಮ್ಮ,ಕಾರಸವಾಡಿ ಸುಧೀರ್ ಕುಮಾರ್,ಕೆ.ರಾಮಕೃಷ್ಣ,ಡಿ.ಪ್ರಕಾಶ್, ಮಾಧು, ಡೊಳ್ಳು ಕುಣಿತ ಕಲಾವಿದ ಗಂಗಾಧರ್,ಮಮತಾ,ಲಕ್ಷ್ಮಿ,ಸಾಕಮ್ಮ ನೇತೃತ್ವ ವಹಿಸಿದ್ದರು.
ಬೆಂಗಳೂರಿನ ಮಾನವ ಹಕ್ಕು ಸಂಘಟನೆಯ ಮುಖಂಡ, ಸಂಭ್ರಮ ಟಿವಿಯ ಮೋಹನ್ ರಾಜ್ ಒಡೆಯರ್ ಕಾವೇರಿ ಹೋರಾಟ ಬೆಂಬಲಿಸಿ ನಿರಂತರ ಧರಣಿಯಲ್ಲಿ ಭಾಗಿಯಾದರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಂ,ಕೆ.ಬೋರಯ್ಯ, ರೈತ ಸಂಘದ ಇಂಡು ವಾಳು ಚಂದ್ರಶೇಖರ್, ಮುದ್ದೆ ಗೌಡ, ಕನ್ನಡ ಸೇನೆ ಮಂಜುನಾಥ್,ನಾರಾಯಣ್. ಫಯಾಜ್ ನೇತೃತ್ವ ವಹಿಸಿದ್ದರು

Previous articleಎಸ್‌ಡಿಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ: ಐವರು ಪೊಲೀಸ್ ವಶಕ್ಕೆ
Next articleಹುಬ್ಬಳ್ಳಿಯಿಂದ ಮುಂಬೈಗೆ ಏರ್‌ಬಸ್ ವಿಮಾನ‌ ಸೇವೆ