ನೈತಿಕ ಪೊಲೀಸ್ ಗಿರಿ ತಡೆಗೆ – ‘ಆ್ಯಂಟಿ ಕಮ್ಯುನಲ್ ವಿಂಗ್’

0
10
ಪರಮೇಶ್ವರ್

ಮಂಗಳೂರು: ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ‘ಆ್ಯಂಟಿ ಕಮ್ಯುನಲ್ ವಿಂಗ್’ ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಪಶ್ಚಿಮ ವಲಯ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚು ನಡೆಯುತ್ತಿದೆ. ಇದನ್ನು ನಾವು ತಡೆಯದಿದ್ದರೆ ಇಲಾಖೆ ಹಾಗೂ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದಕ್ಕಾಗಿ ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ‘ಆಂಟಿ ಕಮ್ಯುನಲ್ ವಿಂಗ್’ ಪ್ರಾರಂಭ ಮಾಡುತ್ತಿದ್ದೇವೆ. ಈ ವಿಂಗ್‌ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ ಎಂದು ಹೇಳಿದರು.
ಪೊಲೀಸ್ ಇಲಾಖೆಗೆ ಸಾಕಷ್ಟು ಸವಾಲುಗಳಿವೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನರಿದ್ದಾರೆ ಎಂಬುದನ್ನು ಇಡೀ ದೇಶವೇ ನಂಬುತ್ತದೆ. ಇದರ ಜತೆಗೆ ಜಿಲ್ಲೆಯಲ್ಲಿ ಶಾಂತಿ, ಕೋಮು ಸಾಮರಸ್ಯ ಇಲ್ಲ ಎಂಬ ಮಾತಿದೆ. ಶಾಂತಿ-ಸೌಹಾರ್ದತೆ ಇಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಮಂಗಳೂರಿಗೆ ಕಂಪೆನಿಗಳು ಹೂಡಿಕೆ ಮಾಡಲು ಬರುತ್ತಿಲ್ಲ. ಯಾವ ಧೈರ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಬೇಕು ಎಂದು ಕೇಳುತ್ತಾರೆ. ಇನ್ನು ಮುಂದೆ ಕೋಮು ಭಾವನೆಗಳನ್ನು ಪ್ರಚೋದನೆ ಮಾಡುವವರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಗೆ ಹಳೆಯ ಪ್ರಕರಣಗಳ ಫಾಲೋ ಅಪ್ ಮಾಡಲು ಸೂಚನೆ ನೀಡಿದ್ದು, ಪ್ರಕರಣಗಳ ಜವಾಬ್ದಾರಿಯನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾದ ಸಂದರ್ಭದಲ್ಲಿ ೨೦ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದಾಗ, ಇಲ್ಲಿ ಶಾಂತಿ ಕಲ್ಪಿಸಿಕೊಡಿ ಎಂದು ಹೇಳಿದ್ದರು. ಈ ಹಿಂದೆ ಕೋಮು ಸೌಹಾರ್ದತೆಗಾಗಿ ಉಳ್ಳಾಲದಿಂದ ಉಡುಪಿ ತನಕ ಪಾದಯಾತ್ರೆಯನ್ನೂ ಮಾಡಿದ್ದೆ. ಕರಾವಳಿಯಲ್ಲಿ ಇಂದು ಭಯದ ವಾತಾವರಣ ಇದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ತಡೆದು, ಕೋಮು ಸೌಹಾರ್ದತೆ ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ ಎಂದರು.
ಆರಂಭದಲ್ಲಿ ‘ಆಂಟಿ ಕಮ್ಯುನಲ್ ವಿಂಗ್’ನ್ನು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಾರಂಭಿಸುತ್ತೇವೆ, ಇದು ಯಶಸ್ವಿಯಾದರೆ ಮುಂದೆ ಬೇರೆ ಕಡೆ ಅಗತ್ಯ ಬಿದ್ದ ಸ್ಥಳಗಳಿಗೂ ವಿಸ್ತರಿಸುತ್ತೇವೆ ಎಂದು ಹೇಳಿದರು.
ಬೇಕಾಬಿಟ್ಟಿ ಗ್ಯಾರಂಟಿ ಘೋಷಿಸಿಲ್ಲ:
ಇದಕ್ಕೂ ಮೊದಲು ಮಾತನಾಡಿದ ಅವರು, ರಾಜ್ಯದ ಜನ ಬಿಜೆಪಿ ಮೇಲಿನ ಆಕ್ರೋಶದಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಅದರ ನಾಯಕತ್ವ ನಂಬಿ ೧೩೫ ಸ್ಥಾನ ಕೊಟ್ಟಿದ್ದಾರೆ. ಜನತೆ ನಮ್ಮ ಮೇಲಿನ ವಿಶ್ವಾಸದಿಂದ ಉತ್ತಮ ಆಡಳಿತದ ಹಿನ್ನೆಲೆಯಲ್ಲಿ ಗೆಲ್ಲಿಸಿದ್ದಾರೆ. ನಾವು ಐದು ಗ್ಯಾರಂಟಿ ತಯಾರು ಮಾಡಿ ಕೊಟ್ಟಿದ್ದೆವು. ನಾವು ಗ್ಯಾರಂಟಿ ಘೋಷಣೆ ಬೇಕಾಬಿಟ್ಟಿ ತೀರ್ಮಾನಿಸಿರಲಿಲ್ಲ. ಹಣಕಾಸು ಖರ್ಚಿನ ಲೆಕ್ಕಾಚಾರ ಮಾಡಿ ಸಾದ್ಯತೆ ಬಳಿಕ ಪ್ರಕಟ ಮಾಡಿದ್ದು ಎಂದು ಹೇಳಿದರು. ನಾವು ಯಾವುದೇ ಬೇಜವಾಬ್ದಾರಿಯಿಂದ ಗ್ಯಾರಂಟಿ ಘೋಷಣೆ ಮಾಡಿಲ್ಲ. ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡುತ್ತದೆ ಎಂದು ಬಿಜೆಪಿ ಮತ್ತು ಪ್ರಧಾನಿಯವರು ಹೇಳುತ್ತಿದ್ದಾರೆ. ನಮಗೂ ಜವಾಬ್ದಾರಿ ಇದೆ ಎಂದರು.

Previous articleಡ್ರಗ್ಸ್ ವಿರುದ್ದ ಕಠಿಣ ಕ್ರಮ
Next articleಉರುಳಿಗೆ ಸಿಕ್ಕಿ ಒದ್ದಾಡಿ ಪ್ರಾಣ ಬಿಟ್ಟ ಚಿರತೆ