ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್‌ ನಿಧನ

Advertisement

ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್‌ ನಿಧನರಾಗಿದ್ದಾರೆ.
ಸುಮಾರು 6 ದಶಕಗಳಿಗೂ ಹೆಚ್ಚು ಕಾಲ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸಿದ 76 ವರ್ಷದ ಕುಂಬ್ಳೆ ಶ್ರೀಧರ ರಾವ್‌ ಅವರು ಸುಂದರ ಪಾತ್ರನಿರ್ವಹಣೆಯಿಂದ ಯಕ್ಷ ರಸಿಕರ ಮನದಲ್ಲಿ ನೆಲೆ ನಿಂತಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮೇಳದಲ್ಲೇ ನಿರಂತರ 50 ವರ್ಷಗಳಿಗೂ ಹೆಚ್ಚು ಕಾಲ ಅವರು ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳ ಹಿಂದೆ ಮೇಳದಿಂದ ನಿವೃತ್ತರಾಗಿದ್ದರು. ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆಯವರಾದ ಶ್ರೀಧರ ರಾವ್ ಉಪ್ಪಿನಂಗಡಿಯ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆಯಲ್ಲಿ ವಾಸವಿದ್ದರು. ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರನಾಗಿ 1948ರಲ್ಲಿ ಜನಿಸಿದ ಶ್ರೀಧರ ರಾವ್, ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ಒಟ್ಟು 60 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.