ನಿಮ್ಮ ‘ಆಪ್ತ’ ಸಚಿವರು ಏಕೆ ಕ್ರಮ ಕೈಗೊಳ್ಳಲಿಲ್ಲ?

Advertisement

ಬೆಂಗಳೂರು: ಮೈಸೂರಿನ ಜಿಲ್ಲಾಧಿಕಾರಿಗಳು ಕಳೆದ ಒಂದು ವರ್ಷದಿಂದ ನಿರಂತರವಾಗಿ 15 ಬಾರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರೂ ನಿಮ್ಮ ‘ಆಪ್ತ’ ಸಚಿವರು ಏಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಮುಡಾ ಅಕ್ರಮ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್‌ ಮಾಡಿರುವ ಅವರು ಮಳ್ಳ ಮಳ್ಳ ಮುಡಾ ಹಗರಣದಲ್ಲಿ ನಿನ್ನ ಪಾಲೆಷ್ಟು ಅಂದರೆ, ತನ್ನ ಪತ್ನಿಯ ತವರು ಮನೆಯಿಂದ ಬಂದ ಭೂಮಿಯಷ್ಟು ಅಂದನಂತೆ. ಮಳ್ಳ ಸಿದ್ದರಾಮಯ್ಯನವರೇ, ಮುಡಾದಲ್ಲಿ 50: 50ರ ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನವನ್ನು ರದ್ದುಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೈಸೂರಿನ ಜಿಲ್ಲಾಧಿಕಾರಿಗಳು ಕಳೆದ ಒಂದು ವರ್ಷದಿಂದ ನಿರಂತರವಾಗಿ 15 ಬಾರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರೂ ನಿಮ್ಮ ‘ಆಪ್ತ’ ಸಚಿವರು ಏಕೆ ಕ್ರಮ ಕೈಗೊಳ್ಳಲಿಲ್ಲ?
ಅಸಲಿಗೆ ಸಚಿವ ಸಂಪುಟದ ಅನುಮೋದನೆ ಇಲ್ಲದೆ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಲು ಅನುಮತಿ ನೀಡಿದ್ದಾದರೂ ಯಾರು? ಯಾರಿಗೆ ಲಾಭ ಮಾಡಿಕೊಡಲು ಈ ಕ್ರಮ? ಈ ಹಿಂದೆ ಭೂಸ್ವಾಧೀನವಾಗಿರುವ ಪ್ರಕರಣಗಳಲ್ಲಿ ಈಗ ಪರಿಹಾರ ವಿತರಣೆ, ಬದಲಿ ನಿವೇಶನ, ತುಂಡು ಜಾಗ ಮಂಜೂರತಿಯನ್ನು ಪ್ರಾಧಿಕಾರದ ಅನುಮತಿ ಪಡೆಯದೆ ಮಾಡಿರುವುದು ನಿಯಮ ಲೋಪವಷ್ಟೇ ಅಲ್ಲದೆ ಪ್ರಾಧಿಕಾರಕ್ಕೆ ಅಪಾರ ಹಣಕಾಸಿನ ನಷ್ಟ ಆಗಿದೆ. ಇದಕ್ಕೆ ಯಾರು ಹೊಣೆ?

ಕೆಸರೆ ಗ್ರಾಮದಲ್ಲಿ ತಮ್ಮ ಧರ್ಮ ಪತ್ನಿ ಅವರಿಗೆ ಸೇರಿದ್ದ 3 ಎಕರೆ 16 ಗುಂಟೆ ಜಮೀನಿನ ಬದಲಾಗಿ ಮೈಸೂರು ನಗರದ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,824 ಚದರ ಅಡಿ ವಿಸ್ತೀರ್ಣದ ದುಬಾರಿ ಬೆಲೆ ಬಾಳುವ 14 ನಿವೇಶನಗಳನ್ನು ತಮ್ಮ ಪತ್ನಿ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದೀರಲ್ಲ ಇದು ಭ್ರಷ್ಟಾಚಾರವಲ್ಲದೆ ಮತ್ತೇನು ಸಿದ್ದರಾಮಯ್ಯನವರೇ? ಸಮಾಜವಾದಿ ಮುಖವಾಡ ಹಾಕಿಕೊಂಡಿರುವ ಕಡುಭ್ರಷ್ಟ ಮಜಾವಾದಿ ಅಂದರೆ ಅದು ಸಿಎಂ ಸಿದ್ದರಾಮಯ್ಯ ಕರ್ನಾಟಕ ಕಂಡ ಅತ್ಯಂತ ಭ್ರಷ್ಟ, ಲೂಟಿಕೋರ ಮುಖ್ಯಮಂತ್ರಿ ಅಂದರೆ ಅದು ಸಿದ್ದರಾಮಯ್ಯ ಎಂದಿದ್ದಾರೆ.