ಕಾನೂನುಬಾಹಿರ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ದೇಶದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ತೀವ್ರಗೊಳಿಸಿದ್ದು, ಭಾರತದ ಖ್ಯಾತ ಕ್ರಿಕೆಟಿಗರು ಹಾಗೂ ಬಾಲಿವುಡ್ ನಟನಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸುತ್ತಿದೆ.
ಸದ್ಯದ ಮಾಹಿತಿ ಪ್ರಕಾರ, ಭಾರತದ ಮಾಜಿ ಆಲ್ ರೌಂಡರ್ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಮಂಗಳವಾರ ದೆಹಲಿಯ ಇ.ಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ತಮ್ಮ ವಕೀಲರೊಂದಿಗೆ ಇ.ಡಿ ಕಚೇರಿಗೆ ಬಂದ ಯುವರಾಜ್, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಒಂದೊಂದು ದಿನ ಒಬ್ಬೊಬ್ಬರು: ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ (43) ಮತ್ತು ರಾಬಿನ್ ಉತ್ತಪ್ಪ (39), ಹಾಗೂ ಬಾಲಿವುಡ್ ನಟ ಸೋನು ಸೂದ್ (52) ಇ.ಡಿ ಸಮನ್ಸ್ ನೀಡಿದೆ. ರಾಬಿನ್ ಉತ್ತಪ್ಪ ಸೆಪ್ಟೆಂಬರ್ 22 ರಂದು, ಯುವರಾಜ್ ಸಿಂಗ್ ಸೆಪ್ಟೆಂಬರ್ 23 ರಂದು (ಮಂಗಳವಾರ) ಮತ್ತು ಸೋನು ಸೂದ್ ಸೆಪ್ಟೆಂಬರ್ 24 ರಂದು (ಬುಧವಾರ) ವಿಚಾರಣೆಗೆ ಹಾಜರಾಗುವಂತೆ ಈ ಮೊದಲೇ ಸೂಚಿಸಲಾಗಿತ್ತು.
ಇ.ಡಿ ಸೂಚಿನೆಯಂತೆ ಯುವರಾಜ್ ಸಿಂಗ್ ಇಂದು (ಮಂಗಳವಾರ) ವಿಚಾರಣೆಗೆ ಹಾಜರಾಗಿದ್ದು ರಾಬಿನ್ ಉತ್ತಪ್ಪ ಸೋಮವಾರ ಇ.ಡಿ ವಿಚಾರಣೆಗೆ ಹಾಜರಾಗಿದ್ದರು. ಸೆಪ್ಟೆಂಬರ್ 24 ಬುಧವಾರ ಬಾಲಿವುಡ್ ನಟ ಸೋನು ಸೂದ್ ಅವರನ್ನು ಇ.ಡಿ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ ಈಗಾಗಲೇ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರನ್ನು ವಿಚಾರಣೆ ನಡೆಸಿದೆ.
ಇದಲ್ಲದೆ, ಪಶ್ಚಿಮ ಬಂಗಾಳದ ಮಾಜಿ ಸಂಸದೆ ಹಾಗೂ ನಟಿ ಮಿಮಿ ಚಕ್ರವರ್ತಿ ಮತ್ತು ಬಂಗಾಳಿ ನಟ ಅಂಕುಶ್ ಹಜ್ರಾ ಅವರ ಹೇಳಿಕೆಗಳನ್ನೂ ಇ.ಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ‘1xBet’ ಎಂಬ ಆನ್‌ಲೈನ್ ಬೆಟ್ಟಿಂಗ್ ವೇದಿಕೆಗೆ ಸಂಬಂಧಿಸಿದಂತೆ ಈ ಅಕ್ರಮ ಹಣ ವರ್ಗಾವಣೆ ಹಗರಣದ ತನಿಖೆ ನಡೆಯುತ್ತಿದೆ. ದೇಶದಲ್ಲಿ ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂತಹ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.