ಐರನ್​ಮ್ಯಾನ್​ ರೇಸ್​ ಪೂರ್ಣಗೊಳಿಸಿದ ಕನ್ನಡಿಗ

0
20

ಬೆಂಗಳೂರು: ಕರ್ನಾಟಕದ ಶ್ರೀನಿವಾಸ್​ ಪ್ರಭು ಮುಂಡ್ಕೂರು ನವೆಂಬರ್​ 9ರಂದು ಗೋವಾದ ಮಿರಾಮರ್​ನಲ್ಲಿ ನಡೆದ ಐರನ್​ಮ್ಯಾನ್​ 70.3 ಟ್ರಯಾಥ್ಲಾನ್​ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸಿ ಪೂರ್ಣಗೊಳಿಸಿದ್ದಾರೆ.

ವಿಶ್ವದ ಅತ್ಯಂತ ಕಠಿಣ ಕ್ರೀಡೆಗಳಲ್ಲಿ ಒಂದಾದ ಈ ಸ್ಪರ್ಧೆಯಲ್ಲಿ ಬೆಂಗಳೂರಿನ 26 ವರ್ಷದ ಶ್ರೀನಿವಾಸ್​ ಪ್ರಭು, ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿರುವುದು ಗಮನಾರ್ಹ. ದೈಹಿಕ ಕ್ಷಮತೆಗೆ ಅತ್ಯಂತ ಸವಾಲುದಾಯಕವಾಗಿರುವ ಐರನ್​ಮ್ಯಾನ್​ 70.3 ಟ್ರಯಾಥ್ಲಾನ್​ ಸ್ಪರ್ಧೆಯು ಸಮುದ್ರದಲ್ಲಿ 1.9 ಕಿಲೋಮೀಟರ್​ ಈಜು, 90 ಕಿಲೋಮೀಟರ್​ ಸೈಕ್ಲಿಂಗ್​ ಮತ್ತು 21.1 ಕಿಲೋಮೀಟರ್​ ಓಟವನ್ನು ಒಳಗೊಂಡಿರುತ್ತದೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿರುವ ಶ್ರೀನಿವಾಸ್​ ಪ್ರಭು ಅವರು ಈ ಹಿಂದೆ ಒಲಿಂಪಿಕ್​ ಟ್ರಯಾಥ್ಲಾನ್​ ಮತ್ತು ಸ್ಪ್ರಿಂಟ್​ ಟ್ರಯಾಥ್ಲಾನ್​ನಲ್ಲಿ ಭಾಗವಹಿಸಿದ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಸ್ಪರ್ಧೆ ಮುಗಿಸಿದ ಹೆಗ್ಗಳಿಕೆಯನ್ನೂ ಹೊಂದಿದ್ದರು. ಇದೀಗ ಅದಕ್ಕಿಂತಲೂ ಒಂದು ಹಂತ ಕಠಿಣವಾದ ಐರನ್​ಮ್ಯಾನ್​ 70.3 ಟ್ರಯಾಥ್ಲಾನ್​ನಲ್ಲೂ ಅದೇ ಸಾಧನೆ ಪುನರಾವರ್ತಿಸಿರುವುದು ವಿಶೇಷವಾಗಿದೆ. ಶ್ರೀನಿವಾಸ್ ಪ್ರಭು ಅವರು ಮುಂಡ್ಕೂರಿನ ಶಿವಶಂಕರ್​ ಪ್ರಭು ಮತ್ತು ಶುಭಲಕ್ಷ್ಮೀ ದಂಪತಿಯ ಪುತ್ರರಾಗಿದ್ದಾರೆ. ಬೆಂಗಳೂರಿನ ಆರ್​ವಿ ಇಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಅವರು, ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.

ಈ ಟ್ರಯಥ್ಲಾನ್‌ಗಳು ದೈಹಿಕ ಸಹಿಷ್ಣುತೆಯನ್ನು ಮಾತ್ರವಲ್ಲದೆ, ಮಾನಸಿಕ ಶಕ್ತಿ, ಶಿಸ್ತು ಮತ್ತು ಕಾರ್ಯತಂತ್ರದ ವೇಗವನ್ನು ಸಹ ಬಯಸುತ್ತವೆ. ಇದು ವಿಶ್ವದ ಅತ್ಯಂತ ಸವಾಲಿನ ಮತ್ತು ಪ್ರತಿಷ್ಠಿತ ದೈಹಿಕ ಸಹಿಷ್ಣುತೆಯ ಸ್ಪರ್ಧೆಗಳಲ್ಲಿ ಒಂದಾಗಿದೆ.

ಸಂಸದ ತೇಜಸ್ವಿಸೂರ್ಯ ಮತ್ತು ಮಾಜಿ ಐಪಿಎಸ್​ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ಇದೇ ಕೂಟದಲ್ಲಿ ಐರನ್​ಮ್ಯಾನ್​ 70.3 ಟ್ರಯಾಥ್ಲಾನ್​ ರೇಸ್ಅನ್ನು​ ಯಶಸ್ವಿಯಾಗಿ ಪೂರ್ಣಗೊಳಿಸಿದರು.

Previous articleಭಾರತದ ಪ್ರಮುಖ ತೀರ್ಥಕ್ಷೇತ್ರಗಳಿಗೆ ಕೋಟ್ಯಂತರ ರೂ. ದೇಣಿಗೆ ಘೋಷಿಸಿದ ಅಂಬಾನಿ
Next articleಓಟವೇ ಉಸಿರು, ಬಡತನವೇ ಶತ್ರು: ಸಾಧಕ ಸಂಗಮೇಶನಿಗೆ ಬೇಕಿದೆ ಸರ್ಕಾರದ ಆಸರೆ

LEAVE A REPLY

Please enter your comment!
Please enter your name here