ದುಬೈ: ಏಷ್ಯಾಕಪ್‌ನಲ್ಲಿ ಸೋಲೇ ಕಾಣದ ಭಾರತ ಹಾಗೂ ಇದೇ ಭಾರತ ವಿರುದ್ಧವೇ ಸೋತಿರುವ ಪಾಕಿಸ್ತಾನ ತಂಡಗಳು, ಕೊನೆಗೂ ಫೈನಲ್ ಪ್ರವೇಶಿಸಿದ್ದು, ಇದೇ ಮೊದಲ ಬಾರಿಗೆ ಏಷ್ಯಾಕಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.
ಶುಕ್ರವಾರ ನಡೆದ ಶ್ರೀಲಂಕಾ ವಿರುದ್ಧದ ರೋಚಕ ಟೈ ಪಂದ್ಯದಲ್ಲಿ ಸೂಪರ್ ಓವರ್ ಮೂಲಕ ಗೆದ್ದ ಸೂರ್ಯಪಡೆ ಮೇಲೆಯೇ ಹೆಚ್ಚು ನಿರೀಕ್ಷೆಗಳಿದ್ದರೂ, ಪಾಕ್ ತನ್ನ ಬತ್ತಳಿಕೆಯಲ್ಲಿರೋ ಅಸ್ತ್ರಗಳನ್ನೆಲ್ಲಾ ಬಳಸಿ ಪಂದ್ಯ ತನ್ನದಾಗಿಸಿಕೊಳ್ಳುವುದೇ ಎಂಬ ಕುತೂಹಲವಿದೆ.
41 ವರ್ಷಗಳಾದರೂ ಒಮ್ಮೆಯೂ ಏಷ್ಯಾಕಪ್ ಫೈನಲ್‌ನಲ್ಲಿ ಮುಖಾಮುಖಿಗೊಳ್ಳದ ಈ ಬದ್ಧವೈರಿಗಳು ಈ ಬಾರಿ ಟ್ರೋಫಿಗಾಗಿ ಕಾದಾಡುತ್ತಿರುವುದರಿಂದ, ಅಭಿಮಾನಿಗಳ ನಿರೀಕ್ಷೆ ಮುಗಿಲು ಮುಟ್ಟಿದೆ.
ಮೈದಾನದಲ್ಲಿ ಸಹಜವಾಗಿಯೇ ಕಿಕ್ಕಿರಿದ ಜನಸಾಗರವೇ ಹರಿದು ಬರುವ ಈ ಪಂದ್ಯದಲ್ಲಿ ಉಭಯ ತಂಡಗಳು ತಮ್ಮಮ್ಮ ತಂಡಗಳನ್ನು ಸಜ್ಜುಗೊಳಿಸಿಕೊಂಡಿದ್ದು, ಜಿದ್ದಾಜಿದ್ದಿನ ಕಾಳಗ ಮೂಡಿ ಬರುವುದು ಖಚಿತ.
ಭಾರತ ತಂಡದಲ್ಲಿ ಸದ್ಯ ಹಾರ್ದಿಕ್ ಪಾಂಡ್ಯ ಆಡುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಹಾರ್ದಿಕ್ ಪಾಂಡ್ಯ ಹಾಗೂ ಅಭಿಷೇಕ್ ಶರ್ಮಾ ಕೊಂಚ ಕ್ರ್ಯಾಂಪ್ಸ್ ಕಾಣಿಸಿಕೊಂಡಿದ್ದು, ಭಾನುವಾರದ ಬೆಳಗ್ಗೆವರೆಗೂ ಇಬ್ಬರನ್ನೂ ಪರಿಶೀಲಿಸಲಾಗುವುದು ಎನ್ನಲಾಗಿದೆ. ಆದರೆ ಪಂದ್ಯದಾರಂಭಕ್ಕೂ ಕೆಲ ಗಂಟೆಗಳ ಮುನ್ನ ತಂಡದ ಘೋಷಣೆಯಾಗಲಿದೆ.
ಭಾರತಕ್ಕೆ ಆಘಾತ ನೀಡುತ್ತಾ ಪಾಕಿಸ್ತಾನ?: ಏಷ್ಯಾಕಪ್ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ವಿರುದ್ಧ ಹೊರತುಪಡಿಸಿ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ.
ಈ ಎರಡು ಸೋಲುಗಳಿಂದ ಪಾಕ್ ತಂಡ ಪಾಠ ಕಲಿತಿದ್ದು ಭಾರತಕ್ಕೆ ಆಘಾತ ನೀಡಲು ಹೊಸ ತಂತ್ರದ ಮೊರೆ ಹೋಗಬಹುದು. ಪಾಕ್ ತಂಡ ಎಲ್ಲಾ ವಿಭಾಗದಲ್ಲೂ ಯಶಸ್ಸು ಕಾಣಬೇಕಿದೆ. ಉತ್ತಮ ಆರಂಭ ನೀಡಿದರೂ ಸೈಯಮ್ ಆಯುಬ್ ವಿಫಲರಾಗಿದ್ದಾರೆ. ಈ ಕಾರಣದಿಂದ ಪಾಕಿಸ್ತಾನ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ಆಗುತ್ತಿಲ್ಲ.
ಪಾಕ್ ತಂಡ ಸವಾಲಿನ ಗುರಿ ನೀಡಿದರೂ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆ ಸುಲಭವಾಗಿ ಚೇಸ್ ಮಾಡುವ ತಾಕತ್ತು ಹೊಂದಿದೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ರನ್ ವೇಗ ಹೆಚ್ಚಿಸುತ್ತಿದ್ದಾರೆ.
ಸೂಪರ್ 4ನಲ್ಲಿ ಭಾರತ ತಂಡದ ಅಗ್ರ ಕ್ರಮಾಂಕ ಆಘಾತ ಅನುಭವಿಸಿತ್ತು. ಬಾಂಗ್ಲಾ ವಿರುದ್ಧದ ಕೊನೆಯ 9 ಓವರ್‌ಗಳಲ್ಲಿ 56 ರನ್ ಗಳಿಸಿತ್ತು. ಅಭಿಷೇಕ್ ಶರ್ಮಾ ಒಬ್ಬರೆ 100 ಸ್ಟ್ರೇಕ್‌ರೇಟ್ ಪಡೆದಿದ್ದಾರೆ. ಪಾಕಿಸ್ತಾನ ತಂಡವನ್ನು ಯಾವುದೇ ಕಾರಣಕ್ಕೂ ಸೂರ್ಯ ಪಡೆ ನಿರ್ಲಕ್ಷಿಸಬಾರದು.
ಕಡಿಮೆಯಾಯಿತು ಟಿಕೆಟ್ ಬೇಡಿಕೆ: ಇಂಡೋ – ಪಾಕ್ ಪಂದ್ಯದ ಬೇಡಿಕೆ ಕಡಿಮೆಯಾದಂತಿದೆ ಎಂಬುದು ಈ ಏಷ್ಯಾಕಪ್‌ನಲ್ಲಿ ಸಾಬೀತಾಗಿದೆ. ಕಳೆದೆರಡು ವಾರಗಳಲ್ಲಿ ಈ ಇಬ್ಬರು ಮುಖಾಮುಖಿಯಾದಾಗಲೂ ಪಂದ್ಯದ ಟಿಕೆಟ್ಸ್ ಸಂಪೂರ್ಣವಾಗಿ ಮಾರಾಟಗೊಂಡಿಲ್ಲ. ಅಲ್ಲದೇ, ಪಂದ್ಯದ ನೇರಪ್ರಸಾರ ಸೋನಿ ಲೈವ್‌ನಲ್ಲಿ ಆಗಲಿದ್ದು, ಹೆಚ್ಚಿನ ಮಂದಿ ಈ ಓಟಿಟಿಯ ಚಂದದಾರರಾಗಲು ಆಸಕ್ತಿ ತೋರಿಲ್ಲ.
ಸಮಾರಂಭದಲ್ಲಿ ನಖ್ವಿ: ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನ ಮುಖ್ಯಸ್ಥ ಹಾಗೂ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಏಷ್ಯಾಕಪ್ ಕ್ರಿಕೆಟ್‌ನ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದು ಭಾರತ ತಂಡದ ನಿಲುವೇನು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೊಹ್ಸಿನ್ ನಖ್ವಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.