ಬೆಳಗಾವಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಸ್ಥಾನಕ್ಕೆ ಆಯ್ಕೆಗೆ ಇಂದು ಚುನಾವಣೆ ನಡೆಯುತ್ತಿದ್ದು, ಎಂಎಲ್‌ಸಿ ಚೆನ್ನರಾಜ ಹಟ್ಟಿಹೊಳಿ ಬೆಂಬಲಿಗರು ಹಾಗೂ ರೈತರ ನಡುವೆ ವಾಗ್ವಾದ ನಡೆದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಪಟ್ಟಣದ ಶ್ರೀ ಕಲ್ಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಷೇರುದಾರರಿಂದ ಮತದಾನ ನಡೆಯುತ್ತಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಸಹೋದರ ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮತದಾನ ನಡೆಯುವ ಸ್ಥಳಕ್ಕೆ ಚೆನ್ನರಾಜ್ ಹಟ್ಟಿಹೊಳಿ ಮತ್ತು ಖಾನಾಪೂರ ಶಾಸಕ ವಿಠಲ ಹಲಗೇಕರ ಬೀಡುಬಿಟ್ಟಿದ್ದಾರೆ. ಆದರೆ ಈ ವೇಳೆ ಎಂಎಲ್‌ಸಿ ಚೆನ್ನರಾಜ ಹಟ್ಟಿಹೊಳಿ ಬೆಂಬಲಿಗರು ಮತ್ತು ರೈತರ ನಡುವೆ ವಾಗ್ವಾದ ನಡೆದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮುಂದೆಯೇ ಫ್ಯಾಕ್ಟರಿ ಉಳಿಸಿ ಎಂದು ರೈತರು ಘೋಷಣೆ ಕೂಗಿದ್ದಾರೆ.
ರೈತರ ಘೋಷಣೆಗೆ ಹೆಬ್ಬಾಳ್ಳರ್ ಬೆಂಬಲಿತ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೈತರು ಮತ್ತು ಹೆಬ್ಬಾಳ್ಳರ್ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಆಗ್ತಿದ್ದಂತೆ ಹೆಬ್ಬಾಳ್ಳರ್ ಅವರನ್ನ ಕಳುಹಿಸಿದ ಸಹೋದರ ಚೆನ್ನರಾಜ ಹಟ್ಟಿಹೊಳಿ ರೈತರನ್ನು ಸ್ವತಃ ಸಮಾಧಾನಪಡಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.